ಮಾತೆ ಮಹಾದೇವಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ: ಶನಿವಾರ ಮಧ್ಯಾಹ್ನ 1 ಗಂಟೆಗೆ ಕ್ರಿಯಾ ಸಮಾಧಿ

Update: 2019-03-15 16:43 GMT

ಬೆಂಗಳೂರು, ಮಾ. 15: ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾದ ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಾಳೆ(ಮಾ.16) ಮಧ್ಯಾಹ್ನ 1ಗಂಟೆಗೆ ಮಠದ ಆವರಣದಲ್ಲಿ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಿಂದ ಶುಕ್ರವಾರ ಮಧ್ಯಾಹ್ನ ಮಾತಾಜಿಯವರ ಪಾರ್ಥೀವ ಶರೀರ ಹೊತ್ತ ವಾಹನ ತುಮಕೂರು, ಚಿತ್ರದುರ್ಗ ಮಾರ್ಗವಾಗಿ ರಾತ್ರಿ 9ಗಂಟೆಗೆ ಕೂಡಲಸಂಗಮ ತಲುಪಿದೆ. ಬಸವಧರ್ಮ ಪೀಠದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲ ವೇದಿಕೆಯಲ್ಲಿ ಲಿಂಗಾಯತ ಕ್ರಿಯಾವಿಧಿ ನೆರವೇರಿಸಿ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಗೊತ್ತಾಗಿದೆ.

ಕರ್ನಾಟಕ, ನೆರೆಯ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆಗಳಿಂದ ಆಗಮಿಸಿರುವ ರಾಷ್ಟ್ರೀಯ ಬಸವದಳದ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು ಮಾತೆ ಮಹಾದೇವಿ ಗೌರವಾರ್ಥ 101ಅಡಿ ಉದ್ದದ ಲಿಂಗಾಯತ ಧರ್ಮದ ಧ್ವಜ ಹಾರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕ್ರಿಯಾ ಸಮಾಧಿ: ಸಮಾಧಿ ಸ್ಥಳದಲ್ಲಿ 6 ಅಡಿ ಎತ್ತರ, 5 ಅಡಿ ಅಗಲದ ಇಷ್ಟಲಿಂಗ ಮಾದರಿಯಲ್ಲಿ ನಿರ್ಮಿಸಿದ್ದು, ಅದರೊಳಗೆ ದೇಹ ಇಟ್ಟು, ತ್ಯಾಗಾಂಗ, ಭೋಗಾಂಗ, ಯೋಗಾಂಗಕ್ಕೆ ಅನುಗುಣವಾಗಿ ಷಟ್ಕೋನಾಕಾರದಲ್ಲಿ 12 ಸಾವಿರ ವಿಭೂತಿಗಳನ್ನು ಜೋಡಣೆ ಮಾಡಲಾಗುತ್ತದೆ.

ಲಿಂಗಾಯತ ಧರ್ಮದ ಸಂಸ್ಕಾರದ ಅನುಗುಣವಾಗಿ ಐಕ್ಯ, ಶರಣ, ಪ್ರಾಣಲಿಂಗಿ, ಪ್ರಸಾದಿ, ಮಹೇಶ, ಭಕ್ತ ಹೀಗೆ ಷಟಸ್ಥಲಗಳ ಸೂಚಕವಾಗಿ ವಿಭೂತಿ ಧಾರಣೆ ನಡೆಯಲಿದೆ. ನಂತರ ಅಲ್ಲಿ ನೆರೆದ ಶ್ರೀಗಳಿಂದ ಅಂತಿಮ ಪ್ರಾರ್ಥನೆ ನಡೆಯಲಿದೆ ಎಂದು ಗೊತ್ತಾಗಿದೆ.

ಗದಗದ ತೋಂಟದಾರ್ಯ ಮಠದ ಶಾಖೆ ಮುಂಡರಗಿಯ ನಿಜಗುಣಾನಂದ ಸ್ವಾಮಿ, ಇಳಕಲ್ ಗುರುಮಹಾಂತ ಸ್ವಾಮಿ, ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಹಾಗೂ ಬಸವಧರ್ಮ ಪೀಠದ ಮಹದೇಶ್ವರ ಸ್ವಾಮಿ ಮೇಲ್ವಿಚಾರಣೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗುವುದು.

ಒಂದು ವೇದಿಕೆಯಲ್ಲಿ ಮಾತೆ ಮಹಾದೇವಿ ಅವರ ಪಾರ್ಥೀವ ಶರೀರ ಇರಿಸಲಿದ್ದು ಇನ್ನು ಎರಡು ವೇದಿಕೆಗಳ ಪೈಕಿ ಒಂದರಲ್ಲಿ ಗಣ್ಯರಿಗೆ, ಮತ್ತೊಂದರಲ್ಲಿ ಮಠಾಧೀಶರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಕಡೆ ಎಲ್ಇಡಿ ಪರದೆ ಹಾಕಲಾಗಿದೆ. 75 ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಸಿಹಿ ಊಟದ ವ್ಯವಸ್ಥೆ

‘ಶರಣರು ಮರಣವೆ ಮಹಾನವಮಿ’ ಎಂದು ವಚನಕಾರರು ಹೇಳಿದ್ದು, ಹೀಗಾಗಿ ಮಾತಾಜಿಯವರ ಅಂತಿಮ ಸಂಸ್ಕಾರಕ್ಕೆ ಬರುವ ಎಲ್ಲರಿಗೂ ಮುಂಜಾನೆ ಉಪಾಹಾರ, ಮಧ್ಯಾಹ್ನ ಸಿಹಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಬಸವಧರ್ಮ ಪೀಠದ ಅಧ್ಯಕ್ಷ ಮಾತೆ ಮಹಾದೇವಿಯವರ ಇಚ್ಛೆಯೂ ಆಗಿತ್ತು’

-ಮಹಾದೇಶ್ವರ ಸ್ವಾಮಿ ಬಸವಧರ್ಮ ಪೀಠ

ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿಯವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಶಿಷ್ಟಾಚಾರ) ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News