ಖಾಸಗಿ ಹೊಟೇಲ್ ಮೇಲೆ ಐಟಿ ದಾಳಿ: 2 ಕೋಟಿ ನಗದು ಜಪ್ತಿ

Update: 2019-03-15 16:27 GMT

ಬೆಂಗಳೂರು, ಮಾ.15: ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದು, ಖಾಸಗಿ ಹೊಟೇಲ್ ನಲ್ಲಿ ಸಂಗ್ರಹಿಸಿದ್ದ 2 ಕೋಟಿ ರೂ. ಮೌಲ್ಯದ ನಗದು ಜಪ್ತಿ ಮಾಡಿದ್ದಾರೆ.

ಗಾಂಧಿನಗರದ ರಾಜಮಹಲ್ ಹೊಟೇಲ್ ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ನಾರಾಯಣಗೌಡ ಬಿ.ಪಾಟೀಲ್ ಅವರ ಬಳಿಯಿದ್ದ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯ ನಿವಾರ್ಹಕ ಇಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಗಾಂಧಿನಗರದಲ್ಲಿದ್ದ ರಾಜಮಹಲ್ ಹೊಟೇಲಿನಲ್ಲಿ ಮೂರು ಕೊಠಡಿ ಬಾಡಿಗೆಗೆ ಪಡೆದಿದ್ದ ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಸಂಗ್ರಹಿಸಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಐಟಿ ಅದಿಕಾರಿಗಳು ಗುರುವಾರ ದಾಳಿ ನಡೆಸಿದ್ದರು.

ಆದಾಯ ತೆರಿಗೆ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ.ಪಾಟೀಲ್ ಪರಾರಿಯಾಗಿದ್ದಾರೆ. ದಾಳಿ ವೇಳೆ 500 ಮತ್ತು 2000 ರೂ. ಮುಖಬೆಲೆಯ ಬರೋಬ್ಬರಿ 2 ಕೋಟಿ ಮೌಲ್ಯದ ನಗದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

ಹಾವೇರಿ ಮನೆ ಮೇಲೆ ದಾಳಿ

ಐಟಿ ದಾಳಿ ಹಿನ್ನೆಲೆ ನಾರಾಯಣಗೌಡ ಬಿ.ಪಾಟೀಲ್ ತಲೆಮರೆಸಿಕೊಂಡಿದ್ದು, ಅವರಿಗೆ ಸೇರಿದ ಕೆಎ25 ಪಿ. 2774 ಸಂಖ್ಯೆಯ ಇನೋವಾ ಕಾರು ಅನ್ನು ಜಪ್ತಿ ಮಾಡಿದ್ದಲ್ಲದೆ, ಹಾವೇರಿಯ ನಂದಿನಿಲೇಔಟ್‌ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿ, 25 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News