ಚೆಕ್‌ ಬೌನ್ಸ್ ಪ್ರಕರಣ: ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ವಶಕ್ಕೆ

Update: 2019-03-15 16:41 GMT

ಬೆಂಗಳೂರು, ಮಾ.15: ಚೆಕ್ ಬೌನ್ಸ್ ಪ್ರಕರಣ ಆರೋಪದಲ್ಲಿ ವಾರಂಟ್ ರೀಕಾಲ್ ಮಾಡಿಸಿಕೊಳ್ಳಲು ಕೋರ್ಟ್‌ಗೆ ಹಾಜರಾಗಿದ್ದ ಶಾಸಕ ಗೂಳಿಹಟ್ಟಿ ಶೇಖರ್‌ರನ್ನು ಇಲ್ಲಿನ ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಿದರು. 

ಬಳಿಕ 100 ರೂ.ಶುಲ್ಕ ಪಾವತಿಸಿಕೊಂಡು ವಾರಂಟ್ ರೀಕಾಲ್ ಮಾಡಿದ ನ್ಯಾಯಾಧೀಶರು, ಪೊಲೀಸರ ವಶಕ್ಕೆ ನೀಡಿದ್ದ ಗೂಳಿಹಟ್ಟಿ ಶೇಖರ್‌ರನ್ನು ಬಿಡುಗಡೆ ಮಾಡಿದರು. ಮತ್ತೊಮ್ಮೆ ಹೀಗೆ ವಿಚಾರಣೆಗೆ ತಪ್ಪಿಸಿಕೊಂಡರೆ ಒಳಗೆ ಕಳಿಸಿಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

1.25 ಕೋಟಿ ಚೆಕ್ ಬೌನ್ಸ್ ಆರೋಪ ಎದುರಿಸುತ್ತಿರುವ ಗೂಳಿಹಟ್ಟಿ ಶುಕ್ರವಾರ, ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಕೋರ್ಟ್‌ಗೆ ಗೈರಾಗಿದ್ದ ಕಾರಣ ಶೇಖರ್ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಬೆಳಗ್ಗೆ ವಾರಂಟ್ ರೀಕಾಲ್ ಮಾಡಿಸಲು ಹಾಜರಾಗಿದ್ದ ಶೇಖರ್‌ರನ್ನು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಆರೋಪಿ ಶೇಖರ್‌ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಮಹಾಲಕ್ಷ್ಮಿ ಲೇಔಟ್ ಜನತಾ ಕೋ ಆಪರೇಟಿವ್ ಸೊಸೈಟಿಯು, ಹೊಸದುರ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ನೀಡಿರುವ ದೂರು ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News