ಡ್ರಗ್ ಮಾಫಿಯಾದಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Update: 2019-03-15 16:58 GMT

ಬೆಂಗಳೂರು, ಮಾ.15: ಮಾದಕ ವಸ್ತು ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದು ಜೈಲುಪಾಲಾಗಿರುವ ಇಬ್ಬರು ವಿದೇಶಿ ಪ್ರಜೆಗಳು ಹಾಗೂ ಓರ್ವ ಸ್ಥಳೀಯನಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರಿನ ಕೋರಮಂಗಲದಲ್ಲಿ ನಿಷೇಧಿತ ಮಾದಕವಸ್ತು ಮಾರಾಟ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಸೇರಿರುವ ಕಾಂಗೋ ದೇಶದ ಕೆನಾನ್ ಆಡ್ಲಿ, ನೈಜೀರಿಯಾ ಮೂಲದ ಜಾನ್ ಕೆನಡಿ ಹಾಗೂ ಬೆಂಗಳೂರಿನ ಆದಿತ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಬಿ.ಎ. ಪಾಟೀಲ್ ಅವರಿದ್ದ ಪೀಠ ಜಾಮೀನು ನಿರಾಕರಿಸಿ ಆದೇಶಿಸಿದೆ. ಆರೋಪಿಗಳು ವಿದೇಶಿ ಪ್ರಜೆಗಳಾಗಿದ್ದು, ಜಾಮೀನು ನೀಡಿದರೆ ನ್ಯಾಯಾಲಯದ ವಿಚಾರಣೆಗೂ ಹಾಜರಾಗದೆ, ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಆರೋಪಿಗಳು ಬಂಧನದ ವೇಳೆ ತಮ್ಮ ಬಳಿ ನಿಷೇಧಿತ ಮಾದಕ ವಸ್ತು ಇದ್ದವೆಂಬುದನ್ನು ಒಪ್ಪಿಕೊಂಡಿದ್ದಾರೆ. ಹಾಗೂ, ಇವರಿಗೆ ಡ್ರಗ್ ಮಾರಾಟ ಮಾಡಲು ಸರಕು ಪೂರೈಸುತ್ತಿದ್ದ ಘಾನಾ ದೇಶದ ಜೋನಾಥಾನ್ ತಲೆ ಮರೆಸಿಕೊಂಡಿರುವುದು, ಆರೋಪಿಗಳೆಲ್ಲರೂ ಮಾದಕ ವಸ್ತು ಕಳ್ಳ ಮಾರಾಟ ಜಾಲದಲ್ಲಿ ಸಕ್ರಿಯರಾಗಿರುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಪೀಠ, ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

2018ರ ಡಿ.2ರಂದು ಕೋರಮಂಗಲ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಬಿ.ಎಸ್ ನೇತತ್ವದ ತಂಡ ಸಮೀಪದ ಬಿಬಿಎಂಪಿ ಅಂಬೇಡ್ಕರ್ ಉದ್ಯಾನವನದ ಬಳಿ ಎಂ.ಡಿ.ಎಂ.ಎ ಎಕ್ಸ್ಟೆಸಿ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬಂಧಿಸಿತ್ತು. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೀಗೆ ಜೈಲು ಪಾಲಾದ ಆರೋಪಿಗಳ ಜಾಮೀನು ಅರ್ಜಿಯನ್ನು ಈ ಮೊದಲು ಅಧೀನ ನ್ಯಾಯಾಲಯ ವಜಾಗೊಳಿಸಿತ್ತು. ಇದೀಗ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದೆ.

ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಆಫ್ರಿಕನ್ ಪ್ರಜೆಗಳೇ ಹೆಚ್ಚಾಗಿ ಭಾಗಿಯಾಗಿದ್ದು, ಇವರ ನಿಯಂತ್ರಣಕ್ಕೆ ನಗರ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ ಆರೋಪಿಗಳು ಕಾನೂನು ಬಲೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು ಎಂದೇ ಪಿಐ ಮಂಜುನಾಥ್ ಕಾರ್ಯಾಚರಣೆಗೂ ಮೊದಲು ಮೇಲಧಿಕಾರಿಗಳಿದ ಅನುಮತಿ ಪಡೆದು ವಿಧಿಬದ್ಧವಾಗಿ ದಸ್ತಗಿರಿ ಮತ್ತಿತರ ಕಾನೂನು ಕ್ರಮಗಳನ್ನು ಜರುಗಿಸಿದ್ದಾರೆ. ಸದ್ಯ ಜೈಲುಪಾಲಾಗಿರುವ ಇಬ್ಪರೂ ವಿದೇಶಿ ಪ್ರಜೆಗಳು ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮೂರು ವರ್ಷಗಳ ಹಿಂದೆಯೇ ಮುಗಿದು ಹೋಗಿದೆ. ಹಾಗಿದ್ದರೂ ನಗರದ ಹೆಣ್ಣೂರಿನಲ್ಲಿ ವಾಸವಿದ್ದ ಆರೋಪಿಗಳು ರಾಜಾರೋಷವಾಗಿ ಮಾದಕವಸ್ತು ಮಾರಾಟ ಜಾಲದಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News