ಮಾರಕಾಸ್ತ್ರಗಳಿಂದ ಶಿಕ್ಷಕಿಗೆ ಹಲ್ಲೆ: ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್

Update: 2019-03-15 17:01 GMT

ಬೆಂಗಳೂರು, ಮಾ.15: ದುಷ್ಕರ್ಮಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡುವ ಮೂಲಕ ಪೊಲೀಸ್ ಇನ್ಸ್‌ಪೆಕ್ಟರ್ ಮಾನವೀಯತೆ ಮೆರೆದಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಅವರು, ಶಿಕ್ಷಕಿಗೆ ರಕ್ತದಾನ ಮಾಡಿದ್ದಾರೆ.

ನಗರದ ಹೊಸಕೆರೆಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನುಜಾ ಅವರಿಗೆ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದನು. ಇದರಿಂದ ತನುಜಾ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಮಾಹಿತಿ ಸಿಕ್ಕಿದ ತಕ್ಷಣ ಸಿದ್ದಲಿಂಗಯ್ಯ ಸ್ಥಳಕ್ಕೆ ಧಾವಿಸಿ ಕೂಡಲೇ ತನುಜಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗೆಂದು ತನುಜಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ತನುಜಾ ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದರು. ಆಗ ವೈದ್ಯರು ಹೆಚ್ಚುವರಿ ರಕ್ತದ ಅವಶ್ಯಕತೆ ಇದೆ ತುರ್ತು ರಕ್ತ ಬೇಕು ಎಂದು ಸೂಚಿಸಿದ್ದರು. ತಕ್ಷಣವೇ ಸಿದ್ದಲಿಂಗಯ್ಯ ಗಾಯಾಳು ತನುಜಾ ಅವರಿಗೆ ರಕ್ತ ನೀಡಿ ಪ್ರಾಣ ಉಳಿಸಿದ್ದರು.

ತನುಜಾ ಹೊಸಕೆರೆಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತನುಜಾ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಅವರ ಕಾರ್ಯವನ್ನು ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News