ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

Update: 2019-03-15 17:03 GMT

ಬೆಂಗಳೂರು, ಮಾ.15: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ದಕ್ಷಿಣ ಐವರಿಕೋಸ್ಟ್‌ನ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 15 ಲಕ್ಷ ರೂ.ಮೌಲ್ಯದ 32 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ಐವರಿಕೋಸ್ಟ್‌ನ ಟೌರ್ ಮಸ್ತ್(44) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಣ್ಣ ಲೇಔಟ್‌ನ ಶಾರದಾ ಶಾಲೆ ಹತ್ತಿರ ಮುರುಗೇಶ್ ಅವರಿಗೆ ಸಂಬಂಧಪಟ್ಟ ಮನೆ ಬಾಡಿಗೆ ಪಡೆದು ನೆಲಮಹಡಿಯಲ್ಲಿ ಆರೋಪಿ ಟೌರ್ ಮಸ್ತ್ ಗಾಂಜಾ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದನೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿಯು ಐವರಿಕೋಸ್ಟ್ ದೇಶದಿಂದ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದು ಹೆಣ್ಣೂರಿನಲ್ಲಿ ವಾಸ್ತವ್ಯ ಹೂಡಿದ್ದ. ಆಂಧ್ರಪ್ರದೇಶದಿಂದ ಗಾಂಜಾವನ್ನು ಕೆ.ಜಿ.ಗಟ್ಟಲೆ ಖರೀದಿಸಿ ಸಂಗ್ರಹಿಸಿಟ್ಟು, ತನ್ನದೆಯಾದ ರೀತಿಯಲ್ಲಿ ಜಾಲ ರೂಪಿಸಿಕೊಂಡು ಪರಿಚಿತರಿಗೆ ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಆತನ ವಶದಿಂದ 32 ಕೆ.ಜಿ ಗಾಂಜಾ, ಮೂರು ಮೊಬೈಲ್, ಪ್ಲಾಸ್ಟಿಕ್ ಕವರ್ ಮತ್ತು 5 ಸಾವಿರ ರೂ. ನಗದು ಸೇರಿದಂತೆ 15 ಲಕ್ಷ ರೂ.ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News