ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸಿಪಿಎಂ ಅಭ್ಯರ್ಥಿಯಾಗಿ ಎಸ್.ವರಲಕ್ಷ್ಮಿ ಕಣಕ್ಕೆ

Update: 2019-03-15 17:31 GMT

ಬೆಂಗಳೂರು, ಮಾ.15: ತೀವ್ರ ಕುತೂಹಲ ಮೂಡಿಸಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಅಭ್ಯರ್ಥಿಯಾಗಿ ಕಾರ್ಮಿಕ ಸಂಘಟನೆಯ ನಾಯಕಿಯಾದ ಎಸ್.ವರಲಕ್ಷ್ಮಿಯನ್ನು ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹಲವಾರು ಹೋರಾಟಗಳನ್ನು ಸಂಘಟಿಸಿರುವ ಕೀರ್ತಿ ವರಲಕ್ಷ್ಮಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಅಲ್ಲದೆ, ಬಾಗೇಪಲ್ಲಿ ಸಿಪಿಎಂ ಪಕ್ಷದ ಭದ್ರ ಬುನಾದಿಯಾಗಿದ್ದರೆ, ಗುಡಿಬಂಡೆ ಹಾಗೂ ಗೌರಿಬಿದನೂರಿನಲ್ಲಿ ಪಕ್ಷ ಬಲಿಷ್ಠವಾಗಿದೆ. ಈ ಮೂರು ಕ್ಷೇತ್ರಗಳಲ್ಲಿ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಪ್ರತಿ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುತ್ತಾ ಬಂದಿದೆ.

2004 ರಲ್ಲಿ ನೇರವಾಗಿ ಸ್ಪರ್ಧೆ ಮಾಡದಿದ್ದರೂ ಜನತಾದಳದಿಂದ ಸ್ಪರ್ಧಿಸಿದ್ದ ನಟ ಶಶಿಕುಮಾರ್‌ಗೆ ಸಿಪಿಎಂ ಬೆಂಬಲ ವ್ಯಕ್ತಪಡಿಸಿತ್ತು. 2009 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರಲಿಲ್ಲ. ಆದರೆ, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯನ್ನು ಕಣಕ್ಕಿಳಿಸಲಾಗಿತ್ತು. ಇದೀಗ ಮಹಿಳೆಗೆ ಅವಕಾಶ ನೀಡುವ ಮೂಲಕ ಪಕ್ಷವು ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಕಾರ್ಮಿಕರು ಹಾಗೂ ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 26 ಸಾವಿರ ಮತಗಳಿಗಷ್ಟೇ ಸೀಮಿತವಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಪಡೆದಿದ್ದ ಮತಗಳಿಗಿಂತಲೂ ಕಡಿಮೆ ಮತಗಳು ಪಡೆದು ಮುಖಭಂಗ ಅನುಭವಿಸುವಂತಾಗಿತ್ತು.

ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದೆ. ಅಲ್ಲದೆ, ವರಲಕ್ಷ್ಮಿ ಅವರಿಗೆ ಆಶಾ, ಅಂಗನವಾಡಿ ನೌಕರರ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳುತ್ತಾ ಎಂಬುದಷ್ಟೇ ನೋಡಬೇಕಿದೆ. ಅಲ್ಲದೆ, ನೆಲಮಂಗಲದ ಸುತ್ತಮುತ್ತಲೂ ಕಾರ್ಖಾನೆಗಳು ಅಧಿಕವಿದ್ದು, ಅಲ್ಲಿನ ಕಾರ್ಮಿಕರ ಬೆಂಬಲವೂ ಸಿಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯ ಶಿಫಾರಸ್ಸಿನಂತೆ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಸಿಐಟಿಯು ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಮಿತಿಯೂ ಒಪ್ಪಿಗೆ ನೀಡಿದೆ. ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದಲೇ ಮಹಿಳಾ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ.

-ಯು.ಬಸವರಾಜು, ಸಿಪಿಎಂ ರಾಜ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News