ನೂತನ ಜಾಹೀರಾತು ನೀತಿ ಜಾರಿ ಮಾ.22ಕ್ಕೆ ಅಂತಿಮಗೊಳಿಸಲಾಗುವುದು: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಎಜಿ

Update: 2019-03-15 17:39 GMT

ಬೆಂಗಳೂರು, ಮಾ.15: ನಗರದಲ್ಲಿ ಅನಧಿಕೃತ ಜಾಹೀರಾತು ನಿಯಂತ್ರಿಸುವ ಕುರಿತ ಹೊಸ ಜಾಹೀರಾತು ನೀತಿ ಮತ್ತು ಉಪ ನಿಯಮಗಳನ್ನು(ಬೈಲಾ) ಅಂತಿಮಗೊಳಿಸಿ ಮಾ.22ರಂದು ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ಗೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಅನಧಿಕೃತ ಜಾಹೀರಾತು ಹಾವಳಿ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಹಂಗಾಮಿ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯ ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಾಗೂ ಎಸೆಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿರುವುದರಿಂದ ಹೊಸ ಜಾಹೀರಾತು ನೀತಿ ಮತ್ತು ಉಪ ನಿಯಮಗಳನ್ನು(ಬೈಲಾ) ಇನ್ನೂ ಅಂತಿಮಗೊಳಿಸಲಾಗಿಲ್ಲ. ಮಾ.22ರಂದು ಬೈಲಾವನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ನ್ಯಾಯಪೀಠವು ಪ್ರತಿಕ್ರಿಯಿಸಿ, ಹೊಸ ಜಾಹೀರಾತು ಬೈಲಾ ಜಾರಿಗೆ ಸಂಬಂಧಿಸಿದಂತೆ 1 ವರ್ಷ ಕಾಲಾವಕಾಶವನ್ನು ತೆಗೆದುಕೊಂಡಿದ್ದಿರಿ. ಆದರೂ ಇನ್ನು ಬೈಲಾವನ್ನು ನಿಮ್ಮಿಂದ ಪೂರ್ಣಗೊಳಿಸಲಾಗಿಲ್ಲ. ಮಾ.22ರಂದು ಯಾವುದೇ ನೆಪವನ್ನು ಹೇಳದೆ ಬೈಲಾ ಜಾರಿಯನ್ನು ಅಂತಿಮಗೊಳಿಸಿ ನ್ಯಾಯಪೀಠಕ್ಕೆ ಸಲ್ಲಿಸಬೇಕೆಂದು ಅಡ್ವೊಕೇಟ್ ಜನರಲ್‌ಗೆ ಸೂಚನೆ ನೀಡಿತು.

ಬಿಬಿಎಂಪಿ ಪರ ವಾದಿಸಿದ ವಕೀಲ ವಿ.ಶ್ರೀನಿಧಿ ಅವರು, ರಾಜ್ಯ ಚುನಾವಣೆ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿಯು ನಗರದಲ್ಲಿ ಮತದಾನದ ಜಾಗೃತಿಗಾಗಿ 200 ಜಾಹೀರಾತು ಫ್ಲೆಕ್ಸ್‌ಗಳನ್ನು ರೈಲ್ವೆ ನಿಲ್ದಾಣ, ಮೆಟ್ರೊ ನಿಲ್ದಾಣ, ಹೈಕೋರ್ಟ್ ಸೇರಿದಂತೆ ಇನ್ನಿತರ ಜಾಗಗಳಲ್ಲಿ ಹಾಕಲಿದೆ. ಅಲ್ಲದೆ, ಟಿವಿಗಳಲ್ಲೂ ಮತದಾನದ ಜಾಗೃತಿಗಾಗಿ ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಮತದಾನದ ಜಾಗೃತಿಗಾಗಿ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡಿತು. ಅರ್ಜಿ ವಿಚಾರಣೆಯನ್ನು ನ್ಯಾಯಪಿ ಪೀಠವು ಮಾ.22ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News