ಮಹಿಷಿ ವರದಿ ವಿರುದ್ಧವಾಗಿ ನೇಮಕಾತಿಗೆ ಮುಂದಾದ ಖಾಸಗಿ ಕಂಪೆನಿಗಳು: ರಾ.ನಂ.ಚಂದ್ರಶೇಖರ್

Update: 2019-03-15 17:53 GMT

ಬೆಂಗಳೂರು, ಮಾ.15: ಕೆಲವು ಖಾಸಗಿ ಕಂಪೆನಿಗಳು ಹುದ್ದೆಗಳ ನೇಮಕಾತಿಯಲ್ಲಿ ಕರ್ನಾಟಕದಲ್ಲಿ 10 ವರ್ಷ ವಾಸವಾಗಿರುವವರನ್ನು ಸ್ಥಳೀಯರು ಹಾಗೂ ಕನ್ನಡ ಜ್ಞಾನದ ಅಗತ್ಯವಿಲ್ಲವೆಂದು ಪರಿಗಣಿಸಲು ಮುಂದಾಗಿರುವುದು ಸರಿಯಲ್ಲವೆಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರೆಂದರೆ ಯಾರು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದೆ. ಪರಿಷ್ಕೃತ ವರದಿಯೂ ಅದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸಿದೆ. ಈಗ ಸಚಿವ ಸಂಪುಟವು ಅನುಮೋದಿಸಿರುವ ಟಿಪ್ಪಣಿಯಲ್ಲಿ ಸರಕಾರದ ಪ್ರೋತ್ಸಾಹ ಪಡೆಯುತ್ತಿರುವ ಖಾಸಗಿ ಉದ್ಯಮಗಳಿಗೆ ಮಹಿಷಿ ವರದಿಯ ಶಿಫಾರಸಿನಲ್ಲಿರುವ 15 ವರ್ಷ ಕರ್ನಾಟಕದ ನಿವಾಸಿ ಆಗಿರಬೇಕು ಮತ್ತು ಕನ್ನಡ ಓದುವ, ಬರೆಯುವ ಜ್ಞಾನವಿರಬೇಕು ಎಂಬುದನ್ನು ಖಚಿತ ಪಡಿಸಿದೆ. ಆದರೆ, ಸರಕಾರದ ಪ್ರೋತ್ಸಾಹ ಪಡೆಯದ ಖಾಸಗಿ ಕಂಪೆನಿಗಳು ನೇಮಕಾತಿಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಾಗಿರುವವರನ್ನು ಪರಿಗಣಿಸಲು ನಿರ್ಧರಿಸಿದೆ. ಹಾಗೂ ಕನ್ನಡದ ಜ್ಞಾನ ಕಡ್ಡಾಯವಗಿ ಇರಬೇಕೆಂಬುದರ ಬಗ್ಗೆ ಎಲ್ಲಿಯೂ ಖಚಿತವಾದ ನಿಲುವನ್ನು ತಾಳಿಲ್ಲ. ಆ ಮೂಲಕ ಕೆಲವು ಖಾಸಗಿ ಕಂಪೆನಿಗಳು ಕನ್ನಡ ಭಾಷೆಗೆ ಅವಮಾನ, ಅಗೌರವ ತೋರಿಸುತ್ತಿವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಕೆಲವು ಖಾಸಗಿ ಉದ್ಯಮಗಳು ನೇರವಾಗಿ ಸರಕಾರದಿಂದ ಪ್ರೋತ್ಸಾಹ ಪಡೆಯದಿದ್ದರೂ ರಾಜ್ಯದ ನೆಲ ಮತ್ತು ಮೂಲಭೂತ ಸೌಕರ್ಯಗಳಾದ ರಸ್ತೆ, ಸಾರಿಗೆ, ನೀರು ವಿದ್ಯುತ್‌ಗಳನ್ನು ಬಳಸಿಕೊಳ್ಳುತ್ತವೆ. ಹಾಗಾಗಿ ಎಲ್ಲ ಖಾಸಗಿ ಉದ್ಯಮಗಳೂ ನೇಮಕಾತಿ ನಡೆಸುವಾಗ ಕರ್ನಾಟಕದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಾಗಿರುವ ಮತ್ತು ಕನ್ನಡ ಜ್ಞಾನವಿರುವವರನ್ನು ಮಾತ್ರ ಪರಿಗಣಿಸಬೇಕು ಎಂಬ ಷರತ್ತನ್ನು ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ಸರಕಾರ ಸಚಿವ ಸಂಪುಟದ ಸಭೆಯಲ್ಲಿ ಖಾಸಗೀ ಉದ್ಯಮಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಂಗೀಕರಿಸಿರುವ ನಿರ್ಣಯವು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಎನ್ನುವ ಕೂಗಿಗೆ ಕಾನೂನು ಬಲ ತಂದು ಕೊಡುವ ಪ್ರಯತ್ನವಾಗಿದೆ. ಮತ್ತು ಸರೋಜಿನಿ ಮಹಿಷಿ ವರದಿಯ ಪ್ರಮುಖ ಸಲಹೆಯೊಂದನ್ನು ಒಪ್ಪಿದಂತಾಗಿದೆ ಎಂದು ಅವರು ಸರಕಾರದ ಕ್ರಮವನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News