ಅಮೆರಿಕ: ನಕಲಿ ವಿವಾಹ ದಂಧೆ ಮೂಲಕ ಅಕ್ರಮ ವಲಸಿಗರಿಗೆ ನೆರವಾಗುತ್ತಿದ್ದ ಭಾರತೀಯನ ಸೆರೆ

Update: 2019-03-16 03:57 GMT

ವಾಷಿಂಗ್ಟನ್, ಮಾ.16: ಅಕ್ರಮ ವಲಸಿಗರಿಗೆ ಅಲ್ಲೇ ನೆಲೆ ನಿಲ್ಲಲು ಅನುಕೂಲವಾಗುವಂತೆ ಅಮೆರಿಕದ ಮಹಿಳೆಯರನ್ನು ವಿವಾಹ ಮಾಡಿಸುತ್ತಿದ್ದ ನಕಲಿ ವಿವಾಹ ದಂಧೆಯನ್ನು ಭೇದಿಸಿದ ಪೊಲೀಸರು ಈ ದಂಧೆಯ ಸೂತ್ರಧಾರನೆನ್ನಲಾದ ಆರೋಪಿ ರವಿ ಬಾಬು ಕೊಲ್ಲಾ (47) ಎಂಬಾತನನ್ನು ಬಂಧಿಸಿದ್ದಾರೆ.

ಭಾರತದಿಂದ ಅಕ್ರಮವಾಗಿ ವಲಸೆ ಬಂದು ಅಮೆರಿಕದಲ್ಲಿ ನೆಲೆ ನಿಲ್ಲುವ ಪ್ರಯತ್ನದಲ್ಲಿರುವವರಿಗೆ ಕಾನೂನುಬಾಹಿರವಾಗಿ ನೆರವು ನೀಡಲು ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಈತ ಅಮೆರಿಕದ ಫ್ಲೋರಿಡಾದ ಪನಾಮ ಸಿಟಿಯಲ್ಲಿ ವಾಸವಿದ್ದ. ಆರೋಪಿಗೆ ಶಿಕ್ಷೆ ವಿಧಿಸುವ ಸಲುವಾಗಿ ತಲ್ಲಾಹಸ್ಸಿ ನ್ಯಾಯಾಲಯದಲ್ಲಿ ಮೇ 22ರಂದು ವಿಚಾರಣೆ ನಿಗದಿಪಡಿಸಲಾಗಿದೆ.

ಈತನ ಸಹವರ್ತಿ, ಅಮೆರಿಕನ್ ಮಹಿಳೆ ಕ್ರಿಸ್ಟಲ್ ಕ್ಲೌಡ್ (40) ಎಂಬಾಕೆಗೆ ವಿವಾಹ ಹಾಗೂ ವೀಸಾ ವಂಚನೆ ಪಿತೂರಿ ಆರೋಪದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2017ರ ಫೆಬ್ರವರಿಯಿಂದ 2018ರ ಆಗಸ್ಟ್ ಅವಧಿಯಲ್ಲಿ ರವಿಬಾಬು, ವಲಸಿಗರ ವಿವಾಹ ದಂಧೆಯನ್ನು, ಅಧಿಕ ಸಂಖ್ಯೆಯಲ್ಲಿ ಭಾರತೀಯರು ವಾಸವಿರುವ ಬೇ ಕೌಂಟಿಯಲ್ಲಿ ನಡೆಸುತ್ತಿದ್ದ. ಅಕ್ರಮ ವಲಸಿಗರು ಇಮಿಗ್ರೇಶನ್ ಪ್ರಯೋಜನ ಪಡೆಯುವ ಸಲುವಾಗಿ ಅಮೆರಿಕನ್ ಮಹಿಳೆಯರನ್ನು ವಿವಾಹ ಮಾಡಿಸುತ್ತಿದ್ದ ಎಂದು ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಅಲ್ಬಾಮಾ ನಗರದಲ್ಲೇ ಈತ 80ಕ್ಕೂ ಹೆಚ್ಚು ಇಂಥ ವಿವಾಹ ಮಾಡಿಸಿದ್ದ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News