ವಿವಾದಿತ ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ 50 ಸಂಘಟನೆಗಳಿಂದ ಪ್ರತಿಭಟನೆ

Update: 2019-03-16 08:02 GMT

ಬೆಂಗಳೂರು, ಮಾ.16: ರಾಜ್ಯ ಸರಕಾರ ನಿರ್ಮಿಸಲು ಹೊರಟಿರುವ ವಿವಾದಿತ ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ 50ಕ್ಕೂ ಅಧಿಕ ನಾಗರಿಕ ಸಂಘಟನೆಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದವು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಯೋಜನೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು.

ಬಿಎಂಟಿಸಿಯ 6,300 ಬಸ್‌ಗಳು ಕೇವಲ ಶೇ.0.5ರಷ್ಟು ರಸ್ತೆಯ ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಕಾರುಗಳು ಬಸ್‌ನ ಎರಡು ಸಾವಿರ ಪಟ್ಟು ಹೆಚ್ಚು ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದು ಬಿಟ್ಟು ಕಾರಿನವರಿಗೆ ದಾರಿ ಮಾಡಲು ಸರ್ಕಾರ ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.

ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ನಗರದ ಕಬ್ಬನ್‌ ಉದ್ಯಾನವನಕ್ಕೆ ಹಾನಿಯಾಗಲಿದೆ. ಇದು ಕರ್ನಾಟಕದ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಯೋಜನೆಗೆ ಸಂಬಂಧಿಸಿದ ಟೆಂಡರ್‌ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪತ್ರ ಚಳವಳಿ: ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆ ಪತ್ರ ಚಳವಳಿ ಶುರು ಮಾಡಿದ್ದು, 50,000 ಪತ್ರಗಳನ್ನು ಸಿಎಂಗೆ ತಲುಪಿಸಲಾಗಿದೆ.  ಇಷ್ಟು ದೊಡ್ಡ ಎಲಿವೇಟೆಡ್ ಕಾರಿಡಾರ್ ಯೋಜನೆ ಮಾಡೋಕೆ ಹೊರಟಿರುವುದು ಜನರ ತೆರಿಗೆ ದುಡ್ಡಲ್ಲಿ. ಜನರ ದುಡ್ಡು ಬೇಕು, ಜನರ ಅಭಿಪ್ರಾಯ ಮಾತ್ರ ಬೇಡ್ವಾ ಅಂತ ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News