ಯಡಿಯೂರಪ್ಪನವರಿಗೆ ಪಕ್ಷ ಮುನ್ನಡೆಸುವ ನೈತಿಕತೆ ಇಲ್ಲ: ಬಿಜೆಪಿ ಮುಖಂಡ ಕೆ.ಬಿ ಶಾಣಪ್ಪ

Update: 2019-03-16 13:20 GMT

ಕಲಬುರ್ಗಿ, ಮಾ. 16: ಯಡಿಯೂರಪ್ಪನವರು ಅಗತ್ಯ ಸಂಖ್ಯಾಬಲ ಇಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಹಾಗೂ ಆಪರೇಷನ್ ಕಮಲಕ್ಕೆ ಯತ್ನಿಸಿದ್ದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ದೂರಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿತ್ತು. ರಾಜ್ಯಪಾಲರು ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ್ದರು. ಆದರೆ, ಸರಕಾರ ರಚನೆಗೆ ಅಗತ್ಯ ಸಂಖ್ಯಾಬಲ ಇರಲಿಲ್ಲ. ಹೀಗಾಗಿ ವಿಪಕ್ಷದಲ್ಲಿರಬೇಕಿತ್ತು. ಆದರೆ, ಬಿಎಸ್‌ವೈ ಪ್ರಮಾಣ ವಚನ ಸ್ವೀಕರಿಸಿ ಎರಡೇ ದಿನದಲ್ಲಿ ರಾಜೀನಾಮೆ ನೀಡಿದರು ಎಂದು ಟೀಕಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಕಾರಾಗೃಹಕ್ಕೆ ಹೋಗಿ ಬಂದದ್ದು ಅತ್ಯಂತ ದುರ್ದೈವದ ಸಂಗತಿ. ಆಪರೇಷನ್ ಕಮಲ ಆರೋಪ ಕೇಳಿ ಬಂದಾಗ ಬಿಎಸ್‌ವೈ ಹಿರಿಯರಾಗಿ ಇಂಥ ಕೆಲಸ ಮಾಡುವುದಿಲ್ಲ ಎಂದು ನಂಬಿದ್ದೆ. ಆದರೆ, ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದಾಗ ದಿಗ್ಭ್ರಮೆ ಮೂಡಿಸಿತು. ಇದು ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಬೇಸರದ ಸಂಗತಿ ಎಂದು ಹೇಳಿದರು.

ಬಿಎಸ್‌ವೈ ಹಾಗೂ ಪಕ್ಷದ ಇತರ ಮುಖಂಡರು ‘ನಮ್ಮ ನಡೆ ಶೋಷಿತರ ಕಡೆ’ ಎಂದು ದಲಿತರ ಮನೆಯಲ್ಲಿ ಊಟಕ್ಕೆ ಮುಂದಾದರು. ಇದರಿಂದ ನನ್ನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟು ಬಿತ್ತು. ಪಕ್ಷದಲ್ಲಿ ಆಂತರಿಕವಾಗಿ ಈ ಬಗ್ಗೆ ತಕರಾರು ಎತ್ತಿದೆ. ಆದರೆ, ಪ್ರಯೋಜನವಾಗಲಿಲ್ಲ. ಪಕ್ಷದ ಶಿಸ್ತನ್ನು ಮೀರಬಾರದು ಎಂಬ ಕಾರಣಕ್ಕೂ ಎಲ್ಲವನ್ನೂ ಸಹಿಸಿಕೊಂಡು ಬಂದೆ. ಇದು ದಲಿತರಿಗೆ ಮಾಡಿರುವ ಮೋಸವಾಗಿದೆ ಎಂದು ಶಾಣಪ್ಪ ವಾಗ್ದಾಳಿ ನಡೆಸಿದರು.

ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲೆ ಸಮರ್ಥರ ಸಂಖ್ಯೆ ಸಾಕಷ್ಟಿದ್ದೂ ಹೊರಗಿನವರನ್ನು ಪಕ್ಷಕ್ಕೆ ಕರೆ ತರುತ್ತಿದ್ದಾರೆ. ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಆದರೆ, ಅವರಿಗೆ ಏನು ಮಾಡಿದ್ದಾರೆಂದು ಶಾಣಪ್ಪ ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಗೆ ರಾಜೀನಾಮೆ: ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಕಾರ್ಯಕಾರಿಣಿ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ಶಾಮರಾವ್ ಪ್ಯಾಟಿ ತಿಳಿಸಿದರು.

ಡಾ.ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಕರೆತಂದು, ಲೋಕಸಭೆ ಚುನಾವಣೆ ಟಿಕೆಟ್ ಕೊಡುತ್ತಿದ್ದಾರೆ. ಪಕ್ಷದಲ್ಲಿ ದುಡಿದವರಿಗೆ, ನಿಷ್ಠಾವಂತರಿಗೆ ಟಿಕೆಟ್ ಕೊಡಿ ಎಂದರೆ ಕೊಡುತ್ತಿಲ್ಲ. ಈ ಬಗ್ಗೆ ಯಾರನ್ನೇ ಕೇಳಿದರೂ ಯಡಿಯೂರಪ್ಪ ಅವರತ್ತ ಬೆರಳು ತೋರಿಸುತ್ತಿದ್ದಾರೆ. ಹೀಗಾಗಿ ನಾನು ಬಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದರೂ ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ನಾಯಕರಿಗೂ ಮಾಹಿತಿ ಇಲ್ಲ. ನನ್ನನ್ನು ಒಂದು ಮಾತೂ ಕೇಳಲಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿ ಜತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಶಾಮರಾವ್ ಪ್ಯಾಟಿ ತಿಳಿಸಿದರು.

‘ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಜಾಧವ್ ಸಮರ್ಥ ಅಭ್ಯರ್ಥಿ, ಹೀಗಾಗಿ ಯಡಿಯೂರಪ್ಪ ಅವರನ್ನು ಕರೆತಂದಿದ್ದಾರೆಂದು ಹೇಳುತ್ತಾರೆ. ಆದರೆ, ಖರ್ಗೆ ಪ್ರಶ್ನಾತೀತ ನಾಯಕ. ಐವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅಂತಹ ದೊಡ್ಡ ವ್ಯಕ್ತಿಯನ್ನು ಮಣಿಸುವುದು ಅಷ್ಟು ಸುಲಭವಲ್ಲ. ಜನರ ಮನಸ್ಸನ್ನು ಗೆಲ್ಲದೆ ಖರ್ಗೆ ಅವರನ್ನು ಸೋಲಿಸಲು ಸಾಧ್ಯವೇ?’

-ಶಾಮರಾವ್ ಪ್ಯಾಟಿ, ಬಿಜೆಪಿ ಮುಖಂಡ

ಪಕ್ಷದಲ್ಲಿ ಇರುವುದಿಲ್ಲ

ನಾನು ಇನ್ನು ಮುಂದೆ ಬಿಜೆಪಿಯಲ್ಲಿ ಇರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಆದರೆ, ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಬಿಜೆಪಿ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಪಕ್ಷ ಮುನ್ನಡೆಸುವ ನೈತಿಕತೆ ಇಲ್ಲ.

-ಕೆ.ಬಿ.ಶಾಣಪ್ಪ, ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News