ಸುಮಲತಾ ನಿರ್ಧಾರದ ಬಳಿಕ ನಮ್ಮ ತೀರ್ಮಾನ: ಬಿಎಸ್‌ವೈ

Update: 2019-03-16 15:41 GMT

ಬೆಂಗಳೂರು, ಮಾ.16: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಹಿರಿಯ ನಟಿ ಸುಮಲತಾ ಅಂಬರೀಶ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಬಳಿಕ ನಾವು ನಮ್ಮ ತೀರ್ಮಾನವನ್ನು ಹೇಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸ್ಪರ್ಧೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಯಾರು ಬೇಕಾದರೂ ಬಂದು ಸ್ಪರ್ಧಿಸಬಹುದು ಎಂದರು.

ದೇಶಾದ್ಯಂತ ನರೇಂದ್ರಮೋದಿ ಪರವಾದ ಗಾಳಿ ಬೀಸುತ್ತಿದೆ. ರಾಹುಲ್‌ಗಾಂಧಿ ಮೊದಲು ಕರ್ನಾಟಕದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನಿರ್ಧರಿಸಲಿ, ಆನಂತರ ನಾವು ಅವರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂದು ಯೋಚಿಸುತ್ತೇವೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಸ್ಪರ್ಧಿಸಿದರೆ ಸಂತೋಷ ಎಂದು ಯಡಿಯೂರಪ್ಪ ಹೇಳಿದರು.

ಅಧಿಕಾರದ ಮದದಿಂದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜಕೀಯ ಜೀವನದಲ್ಲಿ ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಗೆ ಹೋಲಿಕೆಯೇ ಇಲ್ಲ. ಅವರ ಈ ಅಹಂಕಾರದ ವರ್ತನೆಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಾತನಾಡಿ, ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಬರುವುದಾದರೆ ಸ್ವಾಗತ. ಈ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ ಎಂದರು.

ನರಸಿಂಹರಾವ್ ಪ್ರಧಾನಿಯಾಗಿದ್ದಾಗ ನಾನು ರಾಜ್ಯಸಭೆಗೆ ಆಯ್ಕೆಯಾಗಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಹಾಯ ಮಾಡಿದ್ದರು. ನಾನು ರಾಜ್ಯಸಭೆ ಪ್ರವೇಶಿಸಲು 10 ಮತಗಳ ಕೊರತೆಯಿತ್ತು. ಅದನ್ನು ಸರಿದೂಗಿಸಲು ದೇವೇಗೌಡ ಸಹಾಯ ಮಾಡಿದ್ದರು ಎಂದು ಅವರು ಹೇಳಿದರು. ಕಳೆದ ಚುನಾವಣೆ ವೇಳೆ ಅರಕಲಗೂಡಿನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾಡಿದ ಭಾಷಣದಲ್ಲೇ ಹೇಳಿದ್ದೆ. ಅದನ್ನು ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಸ್.ಎಂ.ಕೃಷ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News