ಮಾಧ್ಯಮಗಳು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು: ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

Update: 2019-03-16 16:25 GMT

ಬೆಂಗಳೂರು, ಮಾ.16: ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಜವಾಬ್ದಾರಿಯಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮಾಧ್ಯಮದವರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮತದಾನ ವ್ಯವಸ್ಥೆಯ ಕುರಿತು ಮಾಧ್ಯಮಗಳು ಪ್ರಸಾರ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂತಸದಿಂದ ನಡೆಯುವಂತೆ ನೋಡಿಕೊಳ್ಳಬೇಕು. ಸುದ್ದಿಗಳ ನೆಪದಲ್ಲಿ ಮಾಧ್ಯಮಗಳು ಅಭ್ಯರ್ಥಿಗಳ ಪರವಾಗಿ ಅಥವಾ ವಿರುದ್ಧವಾಗಿ ಸುದ್ದಿ ಬಿತ್ತರ ಮಾಡುತ್ತಾ ಜಾಹೀರಾತಿನಂತೆ ಪ್ರಸಾರ ಮಾಡುವುದು ಹಾಗೂ ಮುದ್ರಿಸುವುದು ಅಪರಾಧವಾಗುತ್ತದೆ ಎಂದು ತಿಳಿಸಿದರು.

ಮಾಧ್ಯಮಗಳ ಸಹಯೋಗವಿಲ್ಲದೆ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅಸಾಧ್ಯ. ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸಲು ಮಾಧ್ಯಮಗಳ ಸಹಕಾರ ಅತಿ ಅಗತ್ಯವಾಗಿದೆ. ಚುನಾವಣೆಯಲ್ಲಿ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರವನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅವುಗಳ ದುರ್ಬಳಕೆಯೂ ಅಸಾಧ್ಯ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕರ್ತವ್ಯ ಮಾಧ್ಯಮಗಳ ಮೇಲಿದೆ ಎಂದರು.

ಚುನಾವಣಾ ಆಯೋಗವು ಎಲ್ಲರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಯಾವಾಗ ಮತದಾನ ಮಾಡಬೇಕು, ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಸೇರಿದಂತೆ ಮತ್ತಿತರೆ ವಿಷಯಗಳ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕೆಗಳು ಚುನಾವಣೆಯ 48 ಗಂಟೆಗಳ ಮೊದಲು ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಜಾಹೀರಾತು ನೀಡುವ ಅಭ್ಯರ್ಥಿಗಳು ತಮ್ಮ ಪೂರ್ತಿ ವಿವರ ಸಮೇತ ಪ್ರಕಟಿಸಬೇಕು. ಮತದಾರ ಹಾಗೂ ಪಕ್ಷ ಬಿಟ್ಟು ಬೇರೆ ಯಾರೂ ಪತ್ರಿಕೆ ಮತ್ತು ಟಿವಿಯಲ್ಲಿ ಜಾಹೀರಾತು ನೀಡುವಂತಿಲ್ಲ. ಜಾಹೀರಾತು ಪ್ರಕಟಿಸುವ ಮೊದಲು ಕಡ್ಡಾಯವಾಗಿ ಅನುಮತಿ ಪತ್ರವನ್ನು ಮಾಧ್ಯಮ ಸಂಸ್ಥೆಗಳು ಪಡೆದಿರಬೇಕು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News