ನಗದು ಜಪ್ತಿ ಪ್ರಕರಣ: ಎಫ್‌ಡಿಎ ನಾರಾಯಣಗೌಡಗೆ ನೋಟಿಸ್

Update: 2019-03-16 17:38 GMT

ಬೆಂಗಳೂರು, ಮಾ.16: ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ವೇಳೆ ತಲೆಮರೆಸಿಕೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನಾರಾಯಣಗೌಡ ಬಿ.ಪಾಟೀಲ್ ಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ನೋಟಿಸ್ ಜಾರಿಗೊಳಿಸಲಾಗಿದೆ.

ಸೋಮವಾರದೊಳಗೆ ನೀವು ವಿಚಾರಣೆಗೆ ಹಾಜರಾಗಿ ಆದಾಯ ಮೂಲದ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲಾಗುವುದು ಎಂದು ಐಟಿ ತನಿಖಾ ತಂಡ ಎಚ್ಚರಿಕೆ ನೀಡಿದೆ.

ಆದಾಯ ತೆರಿಗೆ ಕಾಯ್ದೆ ಅನ್ವಯ ನಾರಾಯಣಗೌಡ ಬಿ.ಪಾಟೀಲ್ ವಿರುದ್ಧ ಮೊಕದ್ದಮೆ ದಾಖಲಿಸಿರುವ ಐಟಿ ತಂಡ ತನಿಖಾ ವೇಳೆ ಸಿಕ್ಕಿಬಿದ್ದಿರುವ 1.5 ಕೋಟಿ ಹಣದ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದೆ.

ಮಾ.15ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ರಾಜ್‌ಮಹಲ್ ಹೊಟೇಲ್ ನಲ್ಲಿ ಐಟಿ ತಂಡ ದಿಢೀರ್ ದಾಳಿ ನಡೆಸಿತ್ತು. ಕೊಠಡಿ ಸಂಖ್ಯೆ 103 ಮತ್ತು 105 ರಲ್ಲಿ ವಾಸ್ತವ್ಯ ಹೂಡಿದ್ದ ನಾರಾಯಣಗೌಡ ಅವರಿಗೆ ಸೇರಿದ ಸುಮಾರು 1.5 ಕೋಟಿಗೂ ಅಧಿಕ ಮೊತ್ತದ ನಗದು ಪತ್ತೆಯಾಗಿತ್ತು. ಈ ವೇಳೆ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ತಲೆಮರೆಸಿಕೊಂಡಿರುವ ನಾರಾಯಣಗೌಡ ಎಲ್ಲಿದ್ದಾರೆ ಎಂಬುದು ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News