ರೌಡಿಗಳ ಜಗತ್ತಿನಲ್ಲಿ 'ರಾಜಣ್ಣನ ಮಗ'

Update: 2019-03-16 18:31 GMT

ರೌಡಿಸಂ ಚಿತ್ರ ಎಂದೊಡನೆ ಕನ್ನಡ ಸಿನೆಮಾ ಪ್ರೇಕ್ಷಕನಲ್ಲಿ ಮೂಡುವಂಥ ಎಲ್ಲ ಅಂಶಗಳನ್ನು ಇರಿಸಿಕೊಂಡೇ ತಯಾರು ಮಾಡಿರುವಂಥ ಚಿತ್ರ ರಾಜಣ್ಣನ ಮಗ. ಬಹುಶಃ ನಿರ್ದೇಶಕ ಕೋಲಾರದವರಾದ ಕಾರಣವೋ ಅಥವಾ ಕನ್ನಡದ ಟ್ರೆಂಡ್ ಎಂದೋ ಗೊತ್ತಿಲ್ಲ, ತೆಲುಗು ಶೈಲಿಯ ಮೇಕಿಂಗ್ ಚಿತ್ರದಲ್ಲಿದೆ. ಹಾಗಂತ ವಿಪರೀತ ರಕ್ತಪಾತವೇನಿಲ್ಲ. ಆದರೆ ಅತಿಮಾನುಷ ಹೊಡೆದಾಟದ ದೃಶ್ಯಗಳಿವೆ. ಅದಕ್ಕೆ ನ್ಯಾಯವೊದಗಿಸುವಂಥ ಕಟ್ಟುಮಸ್ತಾದ ನಾಯಕನಿದ್ದಾನೆ ಎನ್ನುವುದೇ ಚಿತ್ರದ ಹೈಲೈಟ್.

ಗಂಡ, ಹೆಂಡತಿ ಮತ್ತು ಮೂರು ಮಂದಿ ಗಂಡು ಮಕ್ಕಳಿರುವ ನಂದನವನದಂಥ ಕುಟುಂಬ. ಆದರೆ ಅಷ್ಟರಲ್ಲೇ ಅವರ ಆನಂದ ನಂದಿಸುವಂಥ ಘಟನೆಯೊಂದು ನಡೆಯುತ್ತದೆ. ಪುತ್ರ ಗೌರೀಶಂಕರ ಕೊಲೆ ಪ್ರಕರಣವೊಂದಲ್ಲಿ ಜೈಲು ಸೇರುತ್ತಾನೆ. ಸೆರೆಮನೆ ಸೇರಿದ ಮಗನನ್ನು ಬೇಕೆಂದೇ ಮರೆತು ಬಿಡುತ್ತಾರೆ ತಂದೆ. ಆದರೆ ಎಂಟು ವರ್ಷಗಳ ಬಳಿಕ ಕಾರಾಗೃಹದಿಂದ ಮನೆಗೆ ಮರಳುವ ಗೌರಿಶಂಕರನನ್ನು ತಂದೆಯ ತಿರಸ್ಕಾರದ ಮಾತುಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತವೆ. ಆದರೆ ಮತ್ತೊಂದೆಡೆ ಪಾತಕ ಲೋಕ ಕೈಬೀಸಿ ಸ್ವಾಗತಿಸುತ್ತದೆ. ಆದರೆ ಗೌರಿಗೆ ಮಾತ್ರ ಇದರ ಅರಿವೇ ಆಗುವುದಿಲ್ಲ. ಗೌರಿಯ ಹೆಸರಿನಲ್ಲಿ ಕಾಳದಂಧೆಗಳೇ ನಡೆಯತೊಡಗುತ್ತವೆ. ಆದರೆ ಆತ ಅಣ್ಣನ ಮಕ್ಕಳು ಕಲಿಯುವ ಶಾಲೆಯತ್ತ ಹೋಗಿ ಅವರಿಗೆ ತನ್ನಮ್ಮ ಮಾಡಿ ಕೊಟ್ಟ ಅಡುಗೆಯ ರುಚಿ ಸವಿಯುತ್ತಿರುತ್ತಾನೆ. ಆಸ್ಪತ್ರೆಯಲ್ಲಿ ಪರಿಚಿತಳಾದ ವೈದ್ಯೆಯನ್ನು ಪ್ರೀತಿಸುತ್ತಾನೆ. ಜೊತೆಗಿದ್ದ ಸ್ನೇಹಿತರಿಗೆ ಸಹಾಯ ಮಾಡುತ್ತಾನೆ. ಆದರೆ ಸ್ವತಃ ಗೌರಿ ತಂದೆ ಮತ್ತು ಪ್ರೇಯಸಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡುವ ಪರಿಸ್ಥಿತಿ ಉಂಟಾಗುತ್ತದೆ. ಅದು ಯಾಕೆ ಎನ್ನುವುದೇ ಚಿತ್ರದ ಪ್ರಮುಖ ಅಂಶ. ಅದರ ಜೊತೆಯಲ್ಲೇ ಗೌರಿ ಯಾಕೆ ಕೊಲೆಗಾರನಾದ ಎನ್ನುವ ವಿಚಾರಕ್ಕೆ ಚಿತ್ರದ ಕೊನೆಯಲ್ಲಿ ಕತೆಗೆ ತಿರುವು ನೀಡುವ ರೀತಿಯಲ್ಲಿ ಉತ್ತರ ನೀಡಲಾಗಿದೆ. ಅದೆಲ್ಲವನ್ನು ಚಿತ್ರಮಂದಿರದಲ್ಲಿ ನೋಡಿದರೆ ಚೆನ್ನಾಗಿರುತ್ತದೆ.

ರಾಜಣ್ಣನ ಮಗ ಗೌರೀಶಂಕರನ ಪಾತ್ರದಲ್ಲಿ ಹರೀಶ್ ಜಲಗೆರೆ ಜೀವಂತಿಕೆ ತುಂಬಿದ್ದಾರೆ. ಇದು ಅವರಿಗೆ ಎರಡನೇ ಚಿತ್ರವಾದರೂ ಪಾತ್ರಕ್ಕೆ ಬೇಕಾದ ಬಿಲ್ಡಪ್ ನೀಡುವಲ್ಲಿ ಅವರ ದೇಹ ಮತ್ತು ಮುಖಭಾವ ಸಹಕಾರಿಯಾಗಿದೆ. ಈಗಾಗಲೇ ಜೂನಿಯರ್ ಟೈಗರ್ ಪ್ರಭಾಕರ್ ಎಂದೇ ಗುರುತಿಸಿಕೊಳ್ಳುತ್ತಿರುವ ಹರೀಶ್‌ರಲ್ಲಿ ಆರಂಭ ಕಾಲದ ಪ್ರಭಾಕರ್ ಹೇರ್‌ಸ್ಟೈಲ್ ಮತ್ತು ಲುಕ್ಕು ಇದೆಯೆನ್ನುವುದು ಎಲ್ಲ ಪ್ರೇಕ್ಷಕರ ಅಭಿಪ್ರಾಯ. ಆರಡಿ ಎತ್ತರದ ಈ ನಾಯಕ ಕರಾಟೆ ಮತ್ತು ಜಿಮ್ನಾಸ್ಟಿಕ್‌ನಲ್ಲಿ ಪಳಗಿರುವುದರಿಂದ ಆ್ಯಕ್ಷನ್ ದೃಶ್ಯಗಳಿಗೆ ಸಹಜ ಕಳೆ ಬಂದಿದೆ. ಡಿಫರೆಂಟ್ ಡ್ಯಾನಿಯ ಸಾಹಸ ಸಂಯೋಜನೆಯ ಫೈಟುಗಳಿಗೆ ರವಿಬಸ್ರೂರು ಹಿನ್ನೆಲೆ ಸಂಗೀತದ ಬೀಟು ಸೇರಿದಾಗ ಥಿಯೇಟರ್‌ನಲ್ಲಿ ಚಪ್ಪಾಳೆ ಮೊಳಗುತ್ತದೆ. ಎರಡೆರಡು ಲುಕ್‌ನಲ್ಲಿ ಪ್ರತ್ಯಕ್ಷಗೊಳ್ಳುವ ನಾಯಕ ಎರಡಕ್ಕೂ ನ್ಯಾಯವೊದಗಿಸಿದ್ದಾರೆ.

ಗೌರೀಶಂಕರನ ಪ್ರೇಯಸಿ ಡಾಕ್ಟರ್ ಪಾತ್ರದಲ್ಲಿ ನಟಿಸಿರುವ ಅಕ್ಷತಾ ಟಿಪಿಕಲ್ ವೈದ್ಯೆಯ ನಿಷ್ಕಳಂಕ ಅಂದದೊಡನೆ ಮನಸೆಳೆಯುತ್ತಾರೆ. ರಾಜಣ್ಣನಾಗಿ ಚರಣ್ ರಾಜ್‌ಗೆ ನಟಿಸಲು ಹೇಳಿಕೊಳ್ಳುವಂಥ ಅವಕಾಶಗಳೇನೂ ಇಲ್ಲ. ಆದರೆ ಕೆಲವೇ ದೃಶ್ಯಗಳಲ್ಲಿ ಬಂದರೂ ನೆನಪಿರಿಸಿಕೊಳ್ಳುವಂಥ ಪಾತ್ರವನ್ನು ನಿಭಾಯಿಸಿದ್ದಾರೆ ಎನ್ನಬಹುದು. ತಾಯಿಯಾಗಿ ವೀಣಾ ಬಾಲಾಜಿಯವರದು ಮಮತಾಮಯಿ ಪಾತ್ರ. ರಾಜೇಶ್ ನಟರಂಗ ಇತ್ತೀಚೆಗೆ ಪೊಲೀಸ್ ಅಧಿಕಾರಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಕಾರಣವೋ ಗೊತ್ತಿಲ್ಲ, ತುಂಬ ಸ್ವಾಭಾವಿಕ ಕುಣಿಯುವಂತೆ ಮಾಡುತ್ತದೆ ನಟನೆಯಿಂದ ಇಷ್ಟವಾಗುತ್ತಾರೆ. ಐಟಂ ಹಾಡೊಂದು ಪಡ್ಡೆಗಳನ್ನು ಕುಳಿತಲ್ಲೇ ಕುಣಿಸುತ್ತದೆ. ಪ್ರಮೋದ್ ಆರ್. ಛಾಯಾಗ್ರಹಣ ಚಿತ್ರಕ್ಕೆ ಕಳೆ ನೀಡಿದೆ.

ಚಿತ್ರದ ಕತೆಯನ್ನು ಗಮನಿಸಿದಾಗ ತೊಂಬತ್ತರ ದಶಕದ ಆರಂಭದಲ್ಲಿ ತೆರೆಕಂಡಿದ್ದ ‘ಮೋಡದ ಮರೆಯಲ್ಲಿ’ ಚಿತ್ರ ನೆನಪಾಗುತ್ತದೆ. ಅದರಂತೆ ಅನೇಕ ಚಿತ್ರಗಳಲ್ಲಿ ಅನಿವಾರ್ಯವಾಗಿ ರೌಡಿಸಂಗೆ ಸೇರಿಕೊಳ್ಳುವ ನಾಯಕನ ಕತೆಯನ್ನು ತೋರಿಸಲಾಗಿದೆ. ಆದರೆ ಅವುಗಳಂತೆ ಇಲ್ಲಿಯೂ ದುರಂತ ಅಂತ್ಯ ನೀಡಿರುವುದು ಮಾತ್ರ ಅನಗತ್ಯ ಎಂಬಂತಿದೆ. ಉಳಿದಂತೆ ಕನ್ನಡಕ್ಕೆ ಒಬ್ಬ ಆ್ಯಕ್ಷನ್ ಹೀರೋವನ್ನು ನೀಡುವಲ್ಲಿ ಚಿತ್ರ ಯಶಸ್ವಿಯಾಗಿರುವುದು ನಿಜ.

ತಾರಾಗಣ: ಹರೀಶ್ ಜಲಗೆರೆ, ಅಕ್ಷತಾ ಶ್ರೀಧರ ಶಾಸ್ತ್ರಿ
ನಿರ್ದೇಶನ: ಕೋಲಾರ ಸೀನು
ನಿರ್ಮಾಣ: ಜಲಗೆರೆ ಪ್ರೈವೇಟ್ ಲಿಮಿಟೆಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News