ಪ.ಬಂಗಾಳ: ಬೃಹತ್ ಪ್ರಮಾಣದ ಸ್ಫೋಟಕ ಪತ್ತೆ

Update: 2019-03-16 18:46 GMT

 ಕೋಲ್ಕತಾ, ಮಾ.16: ಕಳೆದ ಆರು ದಿನಗಳಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

ಮಾ.9ರಂದು ಉತ್ತರ ಕೋಲ್ಕತಾದ ತಾಲಾ ಸೇತುವೆಯ ಬಳಿ 1 ಸಾವಿರ ಕಿ.ಗ್ರಾಂ.ನಷ್ಟು ಪೊಟಾಶಿಯಂ ನೈಟ್ರೇಟ್, ಮಾ.14ರಂದು ಸಲ್ತೋರಾದಲ್ಲಿ 6,650 ಕಿ.ಗ್ರಾಂ ಅಮೋನಿಯಂ ನೈಟ್ರೇಟ್, 2,650 ಕಿ.ಗ್ರಾಂ ಜಿಲೆಟಿನ್ ಕಡ್ಡಿಗಳು, 52,500 ಡಿಟೊನೇಟರ್‌ಗಳನ್ನು ಕೋಲ್ಕತಾ ಸ್ಪೆಷಲ್ ಟಾಸ್ಕ್‌ಫೋರ್ಸ್(ಎಸ್‌ಟಿಎಫ್) ಪಡೆಗಳು ವಶಕ್ಕೆ ಪಡೆದಿವೆ.

ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಸ್ಫೋಟಕ ಬಳಸುವ ಸಾಧ್ಯತೆಯಿದೆ. ಆದ್ದರಿಂದ ರಾಜ್ಯದ ಎಲ್ಲಾ 42 ಕ್ಷೇತ್ರಗಳನ್ನೂ ‘ಅತೀ ಸೂಕ್ಷ್ಮ’ ಕ್ಷೇತ್ರ ಎಂದು ಘೋಷಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಬಿಜೆಪಿಯ ನಿಲುವನ್ನು ಖಂಡಿಸಿ ಆಡಳಿತಾರೂಢ ಟಿಎಂಸಿ ಪಕ್ಷ ಶುಕ್ರವಾರ ಮತ್ತು ಶನಿವಾರ ಕೇಂದ್ರ ಕೋಲ್ಕತಾದಲ್ಲಿ ಧರಣಿ ಮುಷ್ಕರ ನಡೆಸಿತ್ತು.

   ಈ ರೀತಿ ಬೃಹತ್ ಪ್ರಮಾಣದಲ್ಲಿ ಸ್ಫೋಟಕ ಪತ್ತೆಯಾಗಿರುವುದು ಹಾಗೂ ಇವನ್ನು ಅಸ್ಥಿರ ರಾಜಕೀಯ ಪ್ರದೇಶ ಹಾಗೂ ಬಾಂಗ್ಲಾದೇಶದ ಗಡಿಭಾಗದಲ್ಲಿರುವ 24 ಪರಗಣ ಮತ್ತು ನಾಡಿಯಾ ಜಿಲ್ಲೆಗಳಿಗೆ ಸಾಗಿಸಲಾಗುತ್ತಿತ್ತು ಎಂಬುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಎಸ್‌ಟಿಎಫ್ ಅಧಿಕಾರಿ ತಿಳಿಸಿದ್ದಾರೆ.

     ಇನ್ನೊಂದೆಡೆ, ಸಲ್ತೋರಾದಲ್ಲಿನ ಗೋದಾಮಿಗೆ ಮಾರ್ಚ್ 14ರಂದು ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು ಬೃಹತ್ ಪ್ರಮಾಣದ ಸ್ಪೋಟಕಗಳನ್ನು ಪತ್ತೆ ಹಚ್ಚಿದ್ದರು. ಇವನ್ನು ಜಾಖರ್ಂಡ್, ಒಡಿಶಾ ಮತ್ತು ತೆಲಂಗಾಣದ ಗಣಿಗಳಿಂದ ತರಲಾಗಿದ್ದು ಕೋಮು ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಜಿಲ್ಲೆಗಳಲ್ಲಿ ಚುನಾವಣೆಯ ಸಂದರ್ಭ ಗಲಭೆ ಹುಟ್ಟಿಸಲು ಇವನ್ನು ಬಳಸುವ ಸಾಧ್ಯತೆಯಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ನಡೆದ ಪಂಚಾಯತ್ ಚುನಾವಣೆಯಲ್ಲಿ ಪಶ್ಚಿಮ ಜಿಲ್ಲೆಗಳಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ತೋರಿತ್ತು ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಕಠಿಣ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

ಈ ಮಧ್ಯೆ, ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ 375 ಕಿ.ಗ್ರಾಂ ಜಿಲೆಟಿನ್ ಹಾಗೂ 1 ಸಾವಿರ ಡಿಟೊನೇಟರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News