ತೃತೀಯ ಲಿಂಗಿಗಳು ತಪ್ಪದೇ ಮತ ಚಲಾಯಿಸಿ: ಚುನಾವಣಾಧಿಕಾರಿ ಬಿ.ಎಂ.ವಿಜಯಶಂಕರ್

Update: 2019-03-17 06:50 GMT

ಬೆಂಗಳೂರು, ಮಾ.17: ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವಿದ್ದು, ಅವರಿಗೂ ಮತದಾನದ ಹಕ್ಕಿದೆ. ತಮ್ಮ ಹಕ್ಕನ್ನು ಚಾಚೂ ತಪ್ಪದೇ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ  ಚುನಾವಣಾಧಿಕಾರಿ ಬಿ.ಎಂ.ವಿಜಯಶಂಕರ್ ತಿಳಿಸಿದರು.

ನಗರದಲ್ಲಿಂದು ಪುಲೀಕೇಶಿನಗರದ ರಿಚಾರ್ಡ್ ಪಾರ್ಕ್ ಬಳಿ,ಆಯೋಜಿಸಿದ್ದ, ತೃತೀಯ ಲಿಂಗಿಗಳಿಗಾಗಿಯೇ ವಿವಿ ಪ್ಯಾಟ್​​​ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾನದ ಹಕ್ಕು ಸಂವಿಧಾನಾತ್ಮಕವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದೊರೆತಿದೆ. ಪ್ರತಿನಿಧಿಗಳನ್ನು ಚುನಾವಣೆಗಳ ಮೂಲಕ ಆಯ್ಕೆ ಮಾಡುವಾಗ ಮತವನ್ನು ಹಣ ಅಥವಾ ಬೇರೆ ಯಾವುದೇ ಆಮಿಷಕ್ಕೆ ಒಳಗಾಗದೇ ಮತವನ್ನು ಮಾರಿಕೊಳ್ಳದೇ ನೈತಿಕವಾಗಿ ಮತದಾನ ಮಾಡಬೇಕು ಎಂದರು.

ಮತದಾನದ ಚೀಟಿ ಹೊಂದಿರುವ ಎಲ್ಲರೂ ಮತ ಚಲಾಯಿಸಿದ್ದಲ್ಲಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದುವೇ ಚುನಾವಣಾ ಆಯೋಗದ ಗುರಿಯಾಗಿದೆ. ಪ್ರಥಮ ಬಾರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಮತದಾನ ಖಾತ್ರಿಪಡಿಸುವ ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ. ಮತದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಎಆರ್ ಒ‌ ಅಧಿಕಾರಿ ಡಾ.ಎಂ.ಜಿ.ಶಿವಣ್ಣ ಮಾತನಾಡಿ, ಸಹಾಯಕ ರಿಟರ್ನಿಂಗ್ ಅಧಿಕಾರಿ ಮಹಿಳೆಯರು ಮತ್ತು ಪುರುಷರ ಜೊತೆಗೆ ತೃತೀಯ ಲಿಂಗಿಗಳಿಗೂ ಮತದಾನ ಮಾಡುವ ಹಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು  ಜಾಗೃತಿ ಕಾರ್ಯಕ್ರಮ ಏರ್ಪಡಿಸಿತ್ತು.

ಮತಯಂತ್ರಗಳಲ್ಲಿ ಹೇಗೆ ಮತದಾನ ಮಾಡಬೇಕು ಎಂಬುದರ ಬಗ್ಗೆ ತಿಳಿಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಪುಲೀಕೇಶಿನಗರದ ಎಸಿ ಸುಹೇಲ್ ಅಹ್ಮದ್ ಮಾತನಾಡಿ, ಈ ವ್ಯಾಪ್ತಿಯಲ್ಲಿ 69 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಸಮುದಾಯ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದಾಗಬೇಕಾದರೆ, ಮತದಾನವೂ ಮಾಡಬೇಕು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News