ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ: ರಾಹುಲ್

Update: 2019-03-17 11:30 GMT

ಡೆಹ್ರಾಡೂನ್, ಮಾ.17: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡುಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿ ಘೋಷಿಸಿದ್ದಾರೆ.

ಡೆಹ್ರಾಡೂನ್‍ ನಲ್ಲಿ ಪಕ್ಷದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿಆರ್‍ಪಿಎಫ್ ಯೋಧರ ಮೇಲೆ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಕೋರ್ಬೆಟ್ ಪಾರ್ಕ್‍ನಲ್ಲಿ ಸಾಕ್ಷ್ಯ ಚಿತ್ರ ಚಿತ್ರೀಕರಣದಲ್ಲಿ ತೊಡಗಿದ್ದರು ಎಂದು ವಾಗ್ದಾಳಿ ನಡೆಸಿದರು.

"ಪುಲ್ವಾಮದಲ್ಲಿ ನಮ್ಮ ಯೋಧರ ಮೇಲೆ ದಾಳಿ ನಡೆಯುತ್ತಿದ್ದಾಗ ಮೋದಿ ಏನು ಮಾಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತು. ಅವರು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್‍ ನ ಸಾಕ್ಷ್ಯ ಚಿತ್ರಕ್ಕೆ ಚಿತ್ರೀಕರಣದಲ್ಲಿ ತೊಡಗಿದ್ದರು" ಎಂದು ಆಪಾದಿಸಿದರು.

ರಫೇಲ್ ಬಗ್ಗೆ ಪ್ರಸ್ತಾಪಿಸಿ, "ಅನಿಲ್ ಅಂಬಾನಿ ಹೆಸರನ್ನು ಯಾರು ಕೇಳಿಲ್ಲ?, ಅವರಿಗೆ ಕಾಗದದ ವಿಮಾನ ಮಾಡಲೂ ಗೊತ್ತಿಲ್ಲ. ಮೋದಿ ತಮ್ಮೊಂದಿಗೆ ಅವರನ್ನು ಫ್ರಾನ್ಸ್‍ಗೆ ಕರೆದೊಯ್ದು, 30 ಸಾವಿರ ಕೋಟಿ ರೂಪಾಯಿಯ ಒಪ್ಪಂದದ ವಹಿವಾಟು ಕೊಡಿಸಿದರು. ಯುಪಿಎ ಸರ್ಕಾರ ಎಚ್‍ಎಎಲ್‍ ಗೆ ಈ ಗುತ್ತಿಗೆ ಪಡೆಯಲು ನೆರವಾಗಿತ್ತು. ಆದರೆ ಮೋದಿ ಹಾಗೂ ಅಂಬಾನಿ ಫ್ರಾನ್ಸ್‍ಗೆ ಹೋಗಿ, ಸ್ವತಃ ಮೋದಿಯೇ ಈ ಒಪ್ಪಂದ ಅಂತಿಮಪಡಿಸಿದರು" ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News