ಹತ್ಯಾಕಾಂಡಕ್ಕೆ 9 ನಿಮಿಷಗಳ ಮೊದಲು ಪ್ರಧಾನಿ ಕಚೇರಿಗೆ ಇಮೇಲ್ ಕಳುಹಿಸಿದ್ದ ‘ಹಂತಕ’

Update: 2019-03-17 17:23 GMT

ಕ್ರೈಸ್ಟ್‌ಚರ್ಚ್, ಮಾ.17: ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಹತ್ಯಾಕಾಂಡ ನಡೆಸುವುದಕ್ಕೆ 9 ನಿಮಿಷಗಳ ಮೊದಲು ತನ್ನ ಕಾರ್ಯಾಲಯಕ್ಕೆ ‘ಹಂತಕ’ನು ಇಮೇಲ್ ಮೂಲಕ ‘ ಪ್ರಣಾಳಿಕೆ’ಯೊಂದನ್ನು ಕಳುಹಿಸಿದ್ದನೆಂದು ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂದಾ ಅರ್ಡರ್ನ್ ತಿಳಿಸಿದ್ದಾರೆ.

ಕ್ರೈಸ್ಟ್‌ಚರ್ಚ್ ದಾಳಿ ನಡೆಯುವ 9 ನಿಮಿಷಗಳ ಮೊದಲು ಹಂತಕನು ಇಮೇಲ್ ಮಾಡಿದ ಪ್ರಣಾಳಿಕೆಯನ್ನು ಸ್ವೀಕರಿಸಿದವರಲ್ಲಿ ನಾನು ಕೂಡಾ ಒಬ್ಬಳಾಗಿದ್ದೆ’’ ಎಂದು ಅರ್ಡರ್ನ್ ಅವರು ರವಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ‘‘ಆದರೆ ಆ ಪ್ರಣಾಳಿಕೆಯು ಹತ್ಯಾಕಾಂಡ ನಡೆಯಲಿರುವ ಸ್ಥಳ ಮತ್ತಿತರ ನಿರ್ದಿಷ್ಟ ವಿವರಗಳನ್ನು ಒಳಗೊಂಡಿರಲಿಲ್ಲ’’ ಎಂದು ಆಕೆ ಹೇಳಿದ್ದಾರೆ. ಇಮೇಲ್ ಸ್ವೀಕರಿಸಿದ ಎರಡು ನಿಮಿಷಗಳೊಳಗೆ ಅದನ್ನು ಭದ್ರತಾ ಸೇವೆಗಳ ಇಲಾಖೆಗೆ ಕಳುಹಿಸಿಕೊಡಲಾಗಿತ್ತು ಎಂದು ಜೆಸಿಂದಾ ತಿಳಿಸಿದರು

 ಹಂತಕನು ಬರೆದಿರುವ ದೀರ್ಘವಾದ ಹಾಗೂ ಷಡ್ಯಂತ್ರದ ಉದ್ದೇಶದಿಂದ ಕೂಡಿದ ಬಲಪಂಥೀಯ ನಿಲುವಿನ ಪ್ರಣಾಳಿಕೆಯನ್ನು ತಾನು ಓದಿದ್ದಾಗಿಯೂ ಅವರು ಹೇಳಿದ್ದಾರೆ. ಈ ದಾಳಿ ಘಟನೆಯ ಹಿಂದೆ ಉಗ್ರವಾದಿ ಚಿಂತನೆಗಳನ್ನು ಹೊಂದಿರುವ ಸೈದ್ಧಾಂತಿಕ ಪ್ರಣಾಳಿಕೆಯಿದೆ. ಇದೂ ನಿಜಕ್ಕೂ ಆತಂಕಕಾರಿ’’ ಎಂದು ಆಕೆ ಹೇಳಿದ್ದಾರೆ.

ಕ್ರೈಸ್ಟ್‌ಚರ್ಚ್ ಅವಳಿ ಮಸೀದಿ ದಾಳಿಯನ್ನು ನಡೆಸುವುದಕ್ಕೆ ಮುನ್ನ ಭಯೋತ್ಪಾದಕ ಬ್ರೆಂಟನ್ ಟ್ಯಾರಾಂಟ್, 75 ಪುಟಗಳ ಜನಾಂಗೀಯ ದ್ವೇಷದ ಪ್ರಣಾಳಿಕೆಯನ್ನು ಇಮೇಲ್‌ನಲ್ಲಿ ಪ್ರಸಾರ ಮಾಡಿದ್ದ.

ನ್ಯೂಝಿಲ್ಯಾಂಡ್‌ನಲ್ಲಿ ಮುಂದುವರಿದ ಶೋಕಾಚರಣೆ

* ರವಿವಾರವೂ ನೂರಾರು ಮಂದಿ ನ್ಯೂಝಿಲ್ಯಾಂಡ್ ಪ್ರಜೆಗಳು, ಹತ್ಯಾಕಾಂಡದಲ್ಲಿ ಬಲಿಯಾದವರ ಸ್ಮಾರಕ ಸ್ಥಳಗಳಿಗೆ ಭೇಟಿ ನೀಡಿ ಹೂಗುಚ್ಚಗಳನ್ನಿರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

* ಕ್ರೈಸ್ಟ್‌ಚರ್ಚ್ ಹತ್ಯಾಕಾಂಡದಲ್ಲಿ ಮೃತಪಟ್ಟವರ ಹೆಸರುಗಳನ್ನು ಅವರ ಕುಟುಂಬಗಳ ಜೊತೆ ಹಂಚಿಕೊಂಡಿರುವುದಾಗಿ ಪೊಲೀಸ್ ಆಯುಕ್ತ ಮೈಕ್ ಬುಶ್ ತಿಳಿಸಿದ್ದಾರೆ.

* ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ ಆರ್ಡರ್ನ್ ಅವರು ರವಿವಾರ ವೆಲ್ಲಿಂಗ್ಟನ್ ಕಿಲ್‌ಬಿರೈನ್ ಪ್ರದೇಶದ ಮಸೀದಿಗೆ ಭೇಟಿ ನೀಡಿ, ಕೈಸ್ಟ್ ಚರ್ಚ್ ಅವಳಿ ಮಸೀದಿ ಹತ್ಯಾಕಾಂಡದಲ್ಲಿ ಮೃತಪಟ್ಟವರ ಗೌರವಾರ್ಥ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡರು.

* ಹಂತಕ ಬ್ರಿಂಟನ್ ಟ್ಯಾರಾಂಟ್ ಇತ್ತೀಚೆಗೆ ತನ್ನ ಯುರೋಪ್ ಪ್ರವಾಸದ ವೇಳೆ ಬ್ರಿಟನ್‌ಗೆ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಆತ ಬಿಳಿಯ ಜನಾಂಗೀಯ ಶ್ರೇಷ್ಠತಾವಾದಿ ಚಿಂತನೆಗಳನ್ನು ಬೆಳೆಸಿಕೊಂಡಿರಬಹುದೆಂದು ಶಂಕಿಸಲಾಗಿದೆ.

* ಕ್ರೈಸ್ಟ್ ಚರ್ಚ್ ಹತ್ಯಾಕಾಂಡದ ತನಿಖೆಯನ್ನು ಚುರುಕುಗೊಳಿಸಿರುವ ನೂಝಿಲ್ಯಾಂಡ್‌ನ ವಿದೇಶಾಂಗ ಇಲಾಖೆಯ ಅಧಿಕಾರಿಗಳು, ಭಯೋತ್ಪಾದಕ ಬ್ರಿಂಟನ್ ಟ್ಯಾರಾಂಟ್‌ನ ವಿದೇಶ ಪ್ರಯಾಣದ ವಿವರಗಳನ್ನು ಕೂಡಾ ಕಲೆಹಾಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News