ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ಭಯೋತ್ಪಾದಕ ದಾಳಿ: ಮತ್ತೋರ್ವ ಭಾರತೀಯ ಮೃತ್ಯು

Update: 2019-03-18 03:39 GMT

ಹೈದರಾಬಾದ್, ಮಾ. 18: ಕ್ರೈಸ್ಟ್‌ಚರ್ಚ್ ಮಸೀದಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹೈದರಾಬಾದ್‌ನ ಒಝಾಯಿರ್ ಖಾದಿರ್ (25) ಎಂಬ ವಿದ್ಯಾರ್ಥಿ ಮೃತಪಟ್ಟಿದ್ದು, ದಾಳಿಯಲ್ಲಿ ಸಾವಿಗೀಡಾದ ಭಾರತೀಯರು ಮತ್ತು ಭಾರತ ಮೂಲದ ವ್ಯಕ್ತಿಗಳ ಸಂಖ್ಯೆ ಎಂಟಕ್ಕೇರಿದೆ.

ಖಾದಿರ್ ಸಾವಿನೊಂದಿಗೆ ತೆಲಂಗಾಣ ಮೂಲದ ಮೂರು ಮಂದಿ ದಾಳಿಯಲ್ಲಿ ಬಲಿಯಾದಂತಾಗಿದೆ. ರವಿವಾರ ಖಾದಿರ್ ಸಾವನ್ನು ನ್ಯೂಝಿಲ್ಯಾಂಡ್ ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ದೃಢಪಡಿಸಿದೆ. ಆಸ್ಟ್ರೇಲಿಯಾದ ಭಯೋತ್ಪಾದಕ ಬ್ರೆಂಟನ್ ಟರಂಟ್ ದಾಳಿ ನಡೆಸಿದ ಎರಡು ಮಸೀದಿಗಳ ಪೈಕಿ ಒಂದಾದ ಮಸ್ಜಿದ್ ಅಲ್‌ನೂರ್‌ನಲ್ಲಿ ಇವರು ಪ್ರಾರ್ಥನೆಗೆ ತೆರಳಿದ್ದರು.

ನ್ಯೂಝಿಲ್ಯಾಂಡ್ ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಕಲಿಯಲು ಖಾದಿರ್ ತೆರಳಿದ್ದರು. ಈ ದ್ವೀಪರಾಷ್ಟ್ರಕ್ಕೆ ಖಾದಿರ್ ಪೋಷಕರು ತೆರಳಿದ್ದಾರೆ. ಈ ಆಘಾತಕಾರಿ ಸುದ್ದಿ ತಲುಪಿದಾಗ ಅವರ ತಂದೆ ಸೌದಿ ಅರೇಬಿಯಾದಲ್ಲಿದ್ದರು.

ಶುಕ್ರವಾರದ ದಾಳಿಯ ಬಳಿಕ ಖಾದಿರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಂಬಂಧಿ ಅಮೀರ್ ಅಲಿ ಟ್ವೀಟ್ ಮಾಡಿದ್ದರು. ಇದು ಗಮನಕ್ಕೆ ಬಂದಿದ್ದು, ನ್ಯೂಝಿಲ್ಯಾಂಡ್ ಪೊಲೀಸರ ಸಂಪರ್ಕ ಮಾಡಿ ಮಾಹಿತಿ ಪಡೆಯುತ್ತಿರುವುದಾಗಿ ಭಾರತೀಯ ಹೈಕಮಿಷರ್ ಪ್ರತಿಕ್ರಿಯಿಸಿತ್ತು. "ಖಚಿತ ಮಾಹಿತಿ ಸಿಕ್ಕಿದ ತಕ್ಷಣ ಹಂಚಿಕೊಳ್ಳುತ್ತೇವೆ" ಎಂದು ಹೈಕಮಿಷನ್ ಸ್ಪಷ್ಟಪಡಿಸಿತ್ತು.

ಖಾದಿರ್ ಅವರಲ್ಲದೇ ಹೈದರಾಬಾದ್‌ನ ಫರ್ಹಾಝ್ ಅಶಾನ್ ಮತ್ತು ಕರೀಂನಗರದ ಇಮ್ರಾನ್ ಖಾನ್ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹೈದರಾಬಾದ್‌ನ ಮತ್ತೊಬ್ಬ ವ್ಯಕ್ತಿ ಅಹ್ಮದ್ ಇಕ್ಬಾಲ್ ಜಹಾಂಗೀರ್ ಎಂಬವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News