ಬೆಂಗಳೂರು: ಲಾ ಸ್ಕೂಲ್ ಹಾಸ್ಟೆಲ್‌ನಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ

Update: 2019-03-18 03:55 GMT

ಬೆಂಗಳೂರು, ಮಾ. 18: ಇಲ್ಲಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಕೊಠಡಿಯಲ್ಲಿ ದಲಿತ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಸಂಜೆ ಬೆಳಕಿಗೆ ಬಂದಿದೆ.

ಕನಿಷ್ಕ್ ಭಾರ್ತಿ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಉತ್ತರ ಪ್ರದೇಶ ಮೂಲದ ಈ ವಿದ್ಯಾರ್ಥಿಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗುರುವಾರವೇ ನೇಣಿಗೆ ಶರಣಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದೇಶದ ಅತ್ಯುನ್ನತ ಕಾನೂನು ಸಂಸ್ಥೆಯಲ್ಲಿ ಈತ ಪದವಿ ವಿದ್ಯಾರ್ಥಿಯಾಗಿದ್ದ. ಶನಿವಾರ ಸಂಜೆ 5 ಗಂಟೆ ವೇಳೆಗೆ ಈತನ ಪೋಷಕರು ಹಾಸ್ಟೆಲ್‌ನಲ್ಲಿದ್ದ ಆತನ ಸ್ನೇಹಿತರಿಗೆ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಗುರುವಾರದಿಂದಲೂ ತಮ್ಮ ಕರೆಗಳಿಗೆ ಕನಿಷ್ಕ್ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಹೇಳಿದಾಗ, ಆತನ ಕೊಠಡಿಯತ್ತ ಸ್ನೇಹಿತರು ಧಾವಿಸಿದರು. ಆಗ ಕೊಠಡಿಯಿಂದ ಕೆಟ್ಟವಾಸನೆ ಬರುತ್ತಿತ್ತು. ಕಿಟಕಿಯ ಮೂಲಕ ಇಣುಕಿ ನೋಡಿದಾಗ ದೇಹ ನೇತಾಡುತ್ತಿತ್ತು. ತಕ್ಷಣ ಹಾಸ್ಟೆಲ್ ವ್ಯವಸ್ಥಾಪಕರಿಗೆ ಮತ್ತು ಜ್ಞಾನಭಾರತಿ ಠಾಣೆಗೆ ದೂರು ನೀಡಲಾಯಿತು.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಪೋಷಕರಿಗೆ ಮಾಹಿತಿ ನೀಡಲಾಯಿತು. ತಂದೆ ವೀರೇಂದ್ರ ಭಾರ್ತಿ ಮತ್ತು ಸಂಬಂಧಿಕರು ರವಿವಾರ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿಲ್ಲ. ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಂದೆ ವೀರೇಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೈಕ್ಷಣಿಕವಾಗಿಯೂ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿ, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News