ಮಂಡ್ಯ ಲೋಕಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ

Update: 2019-03-18 13:03 GMT

ಬೆಂಗಳೂರು, ಮಾ.18: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಹಿರಿಯ ನಟಿ ಸುಮಲತಾ ಅಂಬರೀಶ್, ಮಾ.20ರಂದು ಬೆಳಗ್ಗೆ 10 ಗಂಟೆಗೆ ಆಪ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಬರೀಶ್ ನಿಧನದ ಬಳಿಕ ಮಂಡ್ಯದ ಜನರು ನಮ್ಮ ದುಃಖವನ್ನು ಹಂಚಿಕೊಂಡರು. ಅವರ ಪ್ರೀತಿ ವಿಶ್ವಾಸ ಕಳೆದುಕೊಳ್ಳುವ ಮನಸ್ಸು ನಮಗಿಲ್ಲ. ಅಂಬರೀಶ್ ಬಿಟ್ಟುಹೋಗಿರುವ ಕೆಲಸಗಳು, ಕನಸುಗಳನ್ನು ಪೂರ್ಣಗೊಳಿಸಬೇಕಿದೆ ಎಂದರು.

ಅಂಬರೀಶ್ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಲ್ಲಲು ನಿರ್ಧರಿಸಿದೆ. ನಾನು ರಾಜಕಾರಣಿ ಅಲ್ಲ. ರಾಜಕೀಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಪಾಡಿಗೆ ನಾನು, ಅಭಿ ನೆಮ್ಮದಿಯಿಂದ ಜೀವಿಸಬಹುದಿತ್ತು. ಆದರೆ, ಟೀಕೆ, ಅವಮಾನ, ಅಪಮಾನ, ನೋವು ಎಲ್ಲವೂ ಇರುವ ಕಠಿಣ ಹಾದಿಯನ್ನು ಮಂಡ್ಯ ಜನತೆಗಾಗಿ ಆಯ್ಕೆ ಮಾಡಿಕೊಂಡೆ ಎಂದು ಅವರು ಹೇಳಿದರು.

ಚುನಾವಣೆ ಎಂದರೆ ಸುಲಭವಲ್ಲ. ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು, ಮಂಡ್ಯ ಜಿಲ್ಲೆಯ ಸಾವಿರಾರು ಜನರನ್ನು ಭೇಟಿ ಮಾಡಿದೆ. ಅಂಬರೀಶ್‌ಗೆ ಸದಾ ಕಾಲ ಬೆಂಬಲವಾಗಿ ನಿಂತಿದ್ದ ಜನರ ಮಾತನ್ನು ವಿರೋಧಿಸಿದರೆ, ಅಂಬರೀಶ್ ಪತ್ನಿಯಾಗಿ ನಾನು ತಪ್ಪು ನಿರ್ಧಾರ ಕೈಗೊಳ್ಳುವಂತೆ ಆಗುತ್ತಿತ್ತು ಎಂದು ಸುಮಲತಾ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಾಗ ರಾಕ್‌ಲೈನ್ ವೆಂಕಟೇಶ್, ದರ್ಶನ್ ತಮ್ಮ ಬೆಂಬಲ ಸೂಚಿಸಿದರು. ಅದೇ ರೀತಿ ಯಶ್ ಕೂಡ ನೀವು ನಮಗೆ ಆಹ್ವಾನ ನೀಡುವ ಅಗತ್ಯವಿಲ್ಲ. ನಾವೇ ನಿಮ್ಮ ಜೊತೆ ಬರುತ್ತೇವೆ ಎಂದರು. ದರ್ಶನ್ ಹಾಗೂ ಯಶ್ ನನ್ನ ಮನೆಯ ಮಕ್ಕಳಿದ್ದ ಹಾಗೇ ಎಂದು ಅವರು ತಿಳಿಸಿದರು.

ಅಂಬರೀಶ್ ಪಕ್ಷಾತೀತವಾಗಿದ್ದರು. ಎಲ್ಲ ಪಕ್ಷಗಳಲ್ಲೂ ಅವರ ಸ್ನೇಹಿತರಿದ್ದರು. ಅವರು ಬದುಕಿರುವ ತನಕ ಒಂದು ಪಕ್ಷಕ್ಕೆ ಪ್ರಾಮಾಣಿಕವಾಗಿದ್ದರು. ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲದಿರುವ ಕಾರಣ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸುಮಲತಾ ಹೇಳಿದರು. ನನ್ನ ವಿರುದ್ಧ ಮುಖ್ಯಮಂತ್ರಿಯ ಮಗ ಕಣಕ್ಕಿಳಿದಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ 7 ಜನ ಶಾಸಕರು, ಇಬ್ಬರು ಸಚಿವರು, ವಿಧಾನಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಇದ್ದಾರೆ. ಅವರನ್ನು ಎದುರಿಸುವುದು ಸುಲಭದ ಮಾತಲ್ಲ ಎಂಬುದು ನನಗೆ ಗೊತ್ತು. ಆದರೆ, ಮಂಡ್ಯ ಜನತೆಯ ಸಂಪೂರ್ಣ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿರುವುದರಿಂದ, ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ ಎಂದು ಸುಮಲತಾ ತಿಳಿಸಿದರು.

ಜನರಿಗೆ ಒಳ್ಳೆಯದನ್ನು ಮಾಡೋಣ. ವೈಯಕ್ತಿಕ ವಿಚಾರಗಳನ್ನು ಎಳೆದು ತರುವುದು ಬೇಡ. ಕನ್ನಡ ಚಿತ್ರರಂಗ ನನ್ನ ಜೊತೆ ನಿಂತಿದೆ. ದೊಡ್ಡಣ್ಣ, ಸುದೀಪ್ ಸೇರಿದಂತೆ ಎಲ್ಲರೂ ನನ್ನ ಹಿತೈಷಿಗಳು. ಜನ ಹಾಗೂ ದೇವರ ಆಶೀರ್ವಾದ, ಅಂಬರೀಶ್ ಮಾರ್ಗದರ್ಶನ ನನ್ನ ಜೊತೆ ಸದಾ ಇರುತ್ತದೆ ಎಂದು ಅವರು ಹೇಳಿದರು.

ನಟ ಯಶ್ ಮಾತನಾಡಿ, ಸುಮಲತಾ ಅವರ ಮನೆಯ ಮಕ್ಕಳಾಗಿ ನಾವು ಇಲ್ಲಿ ಕೂತಿದ್ದೇವೆ. ದರ್ಶನ್ ನನಗಿಂತ ಹಿರಿಯರು. ಅಂಬರೀಶ್ ನನ್ನನ್ನು ಮನೆಯ ಮಗನಾಗಿ ಸ್ವೀಕರಿಸಿದ್ದಾರೆ. ಅವರು ಎಲ್ಲಿ ಇರುತ್ತಾರೋ, ನಾನು ಅಲ್ಲಿ ಇರುತ್ತೇನೆ. ಅಕ್ಕ ಒಂದು ನಿರ್ಧಾರಕ್ಕೆ ಬಂದಿರುವುದು ಖುಷಿಯ ವಿಚಾರ. ಸ್ವಾರ್ಥಕ್ಕಾಗಿ ಅವರು ಚುನಾವಣೆಗೆ ನಿಂತಿಲ್ಲ ಎಂದರು.

ನಟ ದರ್ಶನ್ ಮಾತನಾಡಿ, ಅಪ್ಪಾಜಿ ಕನಸುಗಳನ್ನು ನನಸು ಮಾಡಲು ಇಲ್ಲಿ ಸೇರಿದ್ದೇವೆ. ಸ್ಟಾರ್ ನಟರಾಗಿ ನಾವು ಬಂದಿಲ್ಲ. ಅಮ್ಮನ ಮಕ್ಕಳಾಗಿ ನಾನು ಮತ್ತು ಯಶ್ ಬಂದಿದ್ದೇವೆ. ಒಂದು ಎಂ.ಪಿ, ಮೂರು ಎಂಎಲ್ಎ ಚುನಾವಣೆಯಲ್ಲಿ ನಾನು ಅಪ್ಪಾಜಿ ಜೊತೆಗಿದ್ದೆ. ಅವರು ಹೇಳಿದ ಕಡೆ ಪಕ್ಷಬೇಧ ಮರೆತು ಪ್ರಚಾರ ಮಾಡಿದ್ದೇನೆ. ಮನೆಯಲ್ಲಿ ಅಮ್ಮ ಯಾವುದೇ ನಿರ್ಧಾರ ತೆಗೆದುಕೊಂಡರೂ ಬೆಂಬಲ ನೀಡುತ್ತೇವೆ ಎಂದರು.

ಅಭಿಮಾನಿಗಳಿಗೆ ಹೀಗೆ ಮಾಡಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಅವರು ತಮಗಿಷ್ಟವಾದ ತೀರ್ಮಾನ ಕೈಗೊಳ್ಳುತ್ತಾರೆ. ಅಭಿಮಾನಿಗಳು ದಡ್ಡರಲ್ಲ, ಅವರಿಗೆ ಕಲಾವಿದರ ಬಗ್ಗೆ ಗೊತ್ತು. ಇಲ್ಲಿ ಭಿನ್ನಾಭಿಪ್ರಾಯದ ಪ್ರಶ್ನೆಯೇ ಬರಲ್ಲ. ಪಕ್ಷಗಳಿಗಿಂತ ಒಳ್ಳೆ ಅಭ್ಯರ್ಥಿಗೆ ಮತ ನೀಡಿ ಎಂದು ಕೋರುತ್ತೇನೆ. ಅಂಬರೀಶ್ ಕುಟುಂಬವನ್ನು ಮಂಡ್ಯ ಜನ ಕೈ ಬಿಡಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದರ್ಶನ್, ಒಂದು ಕ್ಷೇತ್ರದಲ್ಲಿ ಇಬ್ಬರ ಪರವಾಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ನನಗೆ ಪ್ರಜ್ವಲ್ ಒಳ್ಳೆಯ ಸ್ನೇಹಿತ, ಅವರು ಕರೆದರೆ ಹಾಸನದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಮಾತ್ರ ಫುಲ್ ಸಿನಿಮಾ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ದೊಡ್ಡಣ್ಣ, ಅಂಬರೀಶ್ ಪುತ್ರ ಹಾಗೂ ನಟ ಅಭಿಷೇಕ್ ಅಂಬರೀಶ್ ಉಪಸ್ಥಿತರಿದ್ದರು.

ನಮ್ಮ ಕುಟುಂಬವನ್ನು ಮಂಡ್ಯದಿಂದ ದೂರ ಇಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನು ಅದಕ್ಕೆ ಅವಕಾಶ ನೀಡಲ್ಲ. ಮಂಡ್ಯ ಜನರ ಅಪೇಕ್ಷೆಯಂತೆ ನಮ್ಮ ತಾಯಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಮ್ಮ ಕುಟುಂಬದ ಇಬ್ಬರು ಅಣ್ಣಂದಿರು ಇಲ್ಲಿಗೆ ಬಂದಿರುವುದು ನಮಗೆ ದೊಡ್ಡ ಬಲ. ನನ್ನ ರಾಜಕೀಯ ಪ್ರವೇಶಕ್ಕೆ ತಾಯಿ ಚುನಾವಣೆಗೆ ನಿಲ್ಲುತ್ತಿಲ್ಲ.

-ಅಭಿಷೇಕ್ ಅಂಬರೀಶ್

ಮಂಡ್ಯದ ಚುನಾವಣಾ ಪ್ರಚಾರದಲ್ಲಿ ನನ್ನದು ಗೆಸ್ಟ್ ಅಪಿಯರೆನ್ಸ್ ಅಲ್ಲ, ಪೂರ್ತಿ ಸಿನಿಮಾನೇ ಮಾಡ್ತೀನಿ.

-ದರ್ಶನ್, ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News