ದಾಖಲೆ ಮತಗಳ ಅಂತರದಿಂದ ಡಿ.ಕೆ.ಸುರೇಶ್ ರನ್ನು ಗೆಲ್ಲಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ

Update: 2019-03-18 14:31 GMT

ಬೆಂಗಳೂರು, ಮಾ.18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

ರವಿವಾರ ತಡರಾತ್ರಿ ನಗರದ ಖಾಸಗಿ ಹೊಟೇಲ್‌ನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೈತ್ರಿ ಸರಕಾರದಲ್ಲಿ ನಾವೆಲ್ಲರೂ ಒಂದೇ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎಂಬ ಭೇದಭಾವ ಇಲ್ಲ. ನಮ್ಮ ಅಭ್ಯರ್ಥಿಯ ಗೆಲುವಿಗೆ ಅವರು, ಅವರ ಅಭ್ಯರ್ಥಿ ಗೆಲುವಿಗೆ ನಾವು ಒಗ್ಗಟ್ಟಿನಿಂದ ಶ್ರಮಿಸಬೇಕು. ಇಲ್ಲಿ ಯಾವುದೇ ಗೊಂದಲ, ಅನುಮಾನಗಳಿಗೆ ಆಸ್ಪದ ಇರಬಾರದು. ರಾಜಕೀಯ ಹಾಗೂ ಮೈತ್ರಿ ಧರ್ಮ ಪಾಲನೆಯಾಗಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ರಾಜಕೀಯದ ದಿಕ್ಕು ದೆಸೆ ಬದಲಾಗಿದೆ. ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್‌ನವರು ನಮ್ಮ ಪರವಾಗಿ ನಿಂತಿದ್ದಾರೆ. ನಾವೆಲ್ಲರೂ ಒಂದೇ ಎಂಬ ರೀತಿಯಲ್ಲಿ ಅವರು ನಡೆದುಕೊಂಡು ಬಂದಿದ್ದಾರೆ. ನಾವು ಕೂಡ ಅದೇ ರೀತಿ ವರ್ತಿಸಬೇಕು ಮತ್ತು ಋಣ ತೀರಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ನಾವೆಲ್ಲರೂ ಒಗ್ಗಟ್ಟಿನಿಂದ ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಅವರ ಗೆಲವು ರಾಜ್ಯದಲ್ಲೇ ಹೊಸ ಇತಿಹಾಸ ಬರೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ದುಡಿಯೋಣ. ಪ್ರಚಾರ ಕಾರ್ಯದಿಂದ ಹಿಡಿದು ಚುನಾವಣೆ ಗೆಲುವಿನವರೆಗೂ ಪ್ರತಿ ಹಂತದಲ್ಲೂ ನಾವು ಸುರೇಶ್ ಅವರ ಬೆನ್ನಿಗೆ ನಿಲ್ಲಬೇಕು. ಸುರೇಶ್ ಅವರ ಭರ್ಜರಿ ಗೆಲುವು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಮುನಿರತ್ನ, ಶಿವಣ್ಣ, ಎ.ಮಂಜು, ಡಾ.ರಂಗನಾಥ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News