ಆಪ್ತ ಸಹಾಯಕರ ಮೂಲಕ ಸಚಿವ ಶಿವಾನಂದ ಪಾಟೀಲ್ ಲಂಚ ಸ್ವೀಕಾರ, ಎಸಿಬಿಗೆ ದೂರು: ರವಿ ಕೃಷ್ಣಾರೆಡ್ಡಿ

Update: 2019-03-18 14:42 GMT

ಬೆಂಗಳೂರು, ಮಾ.18: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ತಮ್ಮ ಆಪ್ತ ಸಹಾಯಕ ಮತ್ತು ಆಪ್ತ ಕಾರ್ಯದರ್ಶಿಯ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ನೀಡಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಆಪ್ತ ಕಾರ್ಯದರ್ಶಿ ಮರೇಗೌಡ ಹಾಗೂ ಆಪ್ತ ಸಹಾಯಕ ಜ್ಯೋತಿ ಖಾನ್ ಹಾಗೂ ಬಸವನ ಬಾಗೇವಾಡಿಯಲ್ಲಿ ಸಚಿವರ ಆಪ್ತ ಸಹಾಯಕರಾಗಿರುವ ಈರಣ್ಣ ಕೊಪ್ಪಳ ಲಂಚಕ್ಕೆ ಬೇಡಿಕೆ ಇಟ್ಟಿರುವಂತಹ ಆಡಿಯೋ ಕ್ಲಿಪಿಂಗ್‌ನಲ್ಲಿ ಈ ಮೊದಲು ಆಗಿರುವ ಕೆಲವು ವರ್ಗಾವಣೆಗಳಿಗೆ ಸಚಿವ ಶಿವಾನಂದ ಪಾಟೀಲ್ ತಲಾ 12 ಲಕ್ಷ ರೂ. ಪಡೆದಿದ್ದಾರೆ ಎಂದು ಜ್ಯೋತಿ ಖಾನ್ ಮಾತನಾಡಿದ್ದಾನೆ ಎಂದು ಆರೋಪಿಸಿದರು.

ವೈದ್ಯಾಧಿಕಾರಿಗಳು ಮತ್ತು ವೈದ್ಯರ ವರ್ಗಾವಣೆ ಸಂಬಂಧಿಸಿದಂತೆ ಸಚಿವ ಶಿವಾನಂದ ಪಾಟೀಲ್ ಅವರ ಆಪ್ತರು ಭ್ರಷ್ಟಾಚಾರ ನಡೆಸಿದ್ದಾರೆ. ವೈದ್ಯಾಧಿಕಾರಿಗಳು ವರ್ಗಾವಣೆಯೊಂದಕ್ಕೆ 10 ರಿಂದ 12 ಲಕ್ಷ ರೂ. ಲಂಚ ಕೇಳಿರುವ ಬಗ್ಗೆ ನಮ್ಮಲ್ಲಿ ಸೂಕ್ತವಾದ ಸಾಕ್ಷಧಾರಗಳಿವೆ. ಅಲ್ಲದೆ, ವರ್ಗಾವಣೆಯ ಆದೇಶಕ್ಕೆ ಈಗಾಗಲೇ ಸಚಿವರು ಸಹಿ ಮಾಡಿದ್ದಾರೆ. ನೀವು 25 ರಿಂದ 30 ಲಕ್ಷ ರೂ. ನೀಡಬೇಕು ಎಂದು ಮರೇಗೌಡ ಬೇಡಿಕೆ ಇಟ್ಟಿರುತ್ತಾನೆ ಎಂದು ತಿಳಿಸಿದರು.

ಶಿವಾನಂದ ಪಾಟೀಲರು ಕೂಡಲೇ ತಮ್ಮ ಆಪ್ತ ಕಾರ್ಯದರ್ಶಿ ಮರೇಗೌಡ ಹಾಗೂ ಆಪ್ತ ಸಹಾಯಕ ಜ್ಯೋತಿ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಹಣಕ್ಕೆ ಬೇಡಿಕೆ ಇಟ್ಟ ಸರಕಾರಿ ಅಧಿಕಾರಿ ಮತ್ತು ಸಚಿವರ ಆಪ್ತ ಕಾರ್ಯದರ್ಶಿ ಮರೇಗೌಡ ವಿರುದ್ಧ ಸುಮುಟೋ ಕಾಯ್ದೆ ಜಾರಿಗೊಳಿಸಿ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News