ಆ್ಯಸಿಡ್ ದಾಳಿ ಕ್ಷಮೆಗೆ ಅರ್ಹವಲ್ಲದ ಅನಾಗರಿಕ, ಕ್ರೂರ ಅಪರಾಧ: ಸುಪ್ರೀಂ ಕೋರ್ಟ್

Update: 2019-03-18 14:44 GMT

ಹೊಸದಿಲ್ಲಿ, ಮಾ.18: ಆ್ಯಸಿಡ್ ದಾಳಿಯು ಅನಾಗರಿಕ ಮತ್ತು ಕ್ರೂರ ದಾಳಿಯಾಗಿದ್ದು,ಅದು ಯಾವುದೇ ಕ್ಷಮೆಗೆ ಅರ್ಹವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

2004ರಲ್ಲಿ 19ರ ಹರೆಯದ ಯುವತಿಯೋರ್ವಳ ಮೇಲೆ ಆ್ಯಸಿಡ್ ಎರಚಿದ್ದಕ್ಕಾಗಿ ಈಗಾಗಲೇ ಐದು ವರ್ಷಗಳ ಜೈಲುಶಿಕ್ಷೆಯನ್ನು ಪೂರೈಸಿರುವ ಇಬ್ಬರು ದೋಷಿಗಳಿಗೆ ಸಂತ್ರಸ್ತೆಗೆ ತಲಾ 1.5 ಲ.ರೂ.ಹೆಚ್ಚುವರಿ ಪರಿಹಾರವನ್ನು ಪಾವತಿಸುವಂತೆ ತಾಕೀತು ಮಾಡಿದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಅಜಯ ರಸ್ತೋಗಿ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಸಂತ್ರಸ್ತ ಪರಿಹಾರ ಯೋಜನೆಯಡಿ ಯುವತಿಗೆ ಪರಿಹಾರವನ್ನು ಪಾವತಿಸುವಂತೆ ಪೀಠವು ಹಿಮಾಚಲ ಪ್ರದೇಶ ಸರಕಾರಕ್ಕೂ ಸೂಚಿಸಿತು.

ಹಾಲಿ ಪ್ರಕರಣದಲ್ಲಿ ಪ್ರತಿವಾದಿಗಳು ಯುವತಿಯ ಮೇಲೆ ಅನಾಗರಿಕ ಮತ್ತು ಕ್ರೂರ ಅಪರಾಧವನ್ನು ಎಸಗಿದ್ದರು ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಮತ್ತು ಈ ಅಪರಾಧವು ಯಾವುದೇ ಕ್ಷಮೆಗೆ ಅರ್ಹವಾಗಿಲ್ಲ. ಸಂತ್ರಸ್ತ ಯುವತಿಯು ಅನುಭವಿಸಿರುವ ಮಾನಸಿಕ ಹತಾಶ ಸ್ಥಿತಿಯನ್ನು ಈ ನ್ಯಾಯಾಲಯವು ಗಮನಿಸದಿರಲು ಸಾಧ್ಯವಿಲ್ಲ ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ಅಥವಾ ಪರಿಹಾರವನ್ನು ಪಾವತಿಸುವುದು ಈ ಮಾನಸಿಕ ಹತಾಶೆಯನ್ನು ನಿವಾರಿಸಲಾಗುವುದಿಲ್ಲ ಎಂದು ಪೀಠವು ತಿಳಿಸಿತು.

 2004,ಜು.12ರಂದು ಯುವತಿಯು ಕಾಲೇಜಿಗೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಘಟನೆಯಲ್ಲಿ ಆಕೆಗೆ ಶೇ.16ರಷ್ಟು ಸುಟ್ಟಗಾಯಗಳಾಗಿದ್ದವು. ವಿಚಾರಣಾ ನ್ಯಾಯಾಲಯವು ದುಷ್ಕರ್ಮಿಗಳಿಗೆ 10 ವರ್ಷಗಳ ಜೈಲುಶಿಕ್ಷೆ ಮತ್ತು ತಲಾ 5,000 ರೂ.ಗಳ ದಂಡವನ್ನು ವಿಧಿಸಿತ್ತು. ಬಳಿಕ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಐದು ವರ್ಷಗಳಿಗೆ ತಗ್ಗಿಸಿತ್ತು ಮತ್ತು ದಂಡದ ಮೊತ್ತವನ್ನು ತಲಾ 25,000 ರೂ.ಗೆ ಹೆಚ್ಚಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರವು 2008,ಮಾ.24ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು.

ತಪ್ಪಿತಸ್ಥರಿಬ್ಬರೂ ಐದು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಿದ ಬಳಿಕ ಕಳೆದ ವರ್ಷದ ಡಿ.9ರಂದು ಬಿಡುಗಡೆಗೊಂಡಿದ್ದರು.

ಉಚ್ಚ ನ್ಯಾಯಾಲಯವು ವಿಧಿಸಿದ್ದ ಜೈಲುಶಿಕ್ಷೆಯ ಪ್ರಮಾಣದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಸಂತ್ರಸ್ತೆಗೆ ತಲಾ 1.50 ಲ.ರೂ.ಗಳನ್ನು ಹೆಚ್ಚುವರಿ ಪರಿಹಾರವಾಗಿ ಪಾವತಿಸುವಂತೆ ತಾಕೀತು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News