ಹೂಡಿಕೆದಾರರ ಸಮಸ್ಯೆಗಳ ಪರಿಹಾರಕ್ಕೆ ಯತ್ನ: ನವೋದ್ಯಮಿಗಳಿಗೆ ರಾಹುಲ್ ಗಾಂಧಿ ಅಭಯ

Update: 2019-03-18 15:48 GMT

ಬೆಂಗಳೂರು, ಮಾ. 18: ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಪಿ) ಸರಳೀಕರಣ ಮಾಡಲಾಗುವುದು. ಜತೆಗೆ ಹೂಡಿಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ನವೋದ್ಯಮಿಗಳಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಅಭಯ ನೀಡಿದ್ದಾರೆ.

ಸೋಮವಾರ ಇಲ್ಲಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನವೋದ್ಯಮಿಗಳೊಂದಿಗೆ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಉದ್ಯಮಿಗಳ ಪ್ರಶ್ನೆಗೆ ಉತ್ತರಿಸಿದರು. ‘ಸ್ಟಾರ್ಟ್ ಅಪ್‌ಗಳಿಗೆ ಹೂಡಿಕೆ ಮಾಡುವುದು ಕಷ್ಟದ ಕೆಲಸ, ಪ್ರತಿ ಬಾರಿ ತೆರಿಗೆ ಪಾವತಿಸಿದರೂ ನಮ್ಮನ್ನು ಕ್ರಿಮಿನಲ್‌ಗಳಂತೆ ನೋಡುತ್ತಾರೆ. ಹೀಗಾಗಿ ಹೂಡಿಕೆ ಮಾಡುವುದು ಬೇಡ ಎನಿಸುತ್ತದೆ’ ಎಂಬ ಪ್ರಶ್ನೆಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

‘ದಲಿತ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ಸಹಕಾರ ನೀಡುವಲ್ಲಿ ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಕೋಟಿ ರೂ.ಲೆಕ್ಕದಲ್ಲಿ ಬಂಡವಾಳಕ್ಕೆ ಭರವಸೆ ಕೇಳುತ್ತಿವೆ(ಕೊಲಾಟ್ರಲ್). ಹೀಗಾದರೆ ದಲಿತರ ಉದ್ಯಮಶೀಲತೆಗೆ ಹೊಡೆತ ಬೀಳುವುದಿಲ್ಲವೇ’ ಎಂಬ ನವೋದ್ಯಮಿಯೊಬ್ಬರು ಕನ್ನಡದಲ್ಲಿ ಕೇಳಿದರು.

ವಿಕೇಂದ್ರಕರಣ ಅಗತ್ಯ: ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬ್ಯಾಕಿಂಗ್ ಉದ್ಯಮ ಕೆಲವರ ಕೈಯಲ್ಲೇ ನಿಂತಿದೆ. ಇದರ ವಿಕೇಂದ್ರೀಕರಣ ಆಗಬೇಕು. ದೊಡ್ಡ-ದೊಡ್ಡ ಉದ್ಯಮಗಳಿಗೆ ಹಣ ನೀಡುವ ಬ್ಯಾಂಕ್‌ಗಳು, ಸಣ್ಣ ಕೈಗಾರಿಗೆಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಸ್ಟಾರ್ಟ್ ಅಪ್‌ಗಳೇ ದೇಶದ ಉದ್ಯೋಗ ಸೃಷ್ಟಿ ಕೇಂದ್ರಗಳು. ಅವುಗಳ ಬಗ್ಗೆ ನಾವು ಗಮನ ಹರಿಸುತ್ತೇವೆ. ದಲಿತ ಸಮುದಾಯದ ಉದ್ಯಮಿಗಳಿಗೆ ಯಾವುದೇ ಸಮಸ್ಯೆಗಳಿಲ್ಲದೆ ನೇರವಾಗಿ ಹಣ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಸ್ಟಾರ್ಟ್ ಅಪ್ ಹಬ್‌ಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ನಮ್ಮ ದೇಶ ಎಲ್ಲದರಲ್ಲೂ ಮುಂದಿದೆ. ಸೂಪರ್ ಪವರ್ ಎಂದು ಕೆಲವರು ಹೇಳುತ್ತಾರೆ. ಆದರೆ, ನಿರುದ್ಯೋಗ ಸಮಸ್ಯೆ ನಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಉದ್ಯೋಗ ಸೃಷ್ಟಿ ಆಗದೆ ಇರುವುದು ವಿಷಾದನೀಯ. ಈ ಬಗ್ಗೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗಮನಹರಿಸಲಿದೆ ಎಂದು ರಾಹುಲ್ ಗಾಂಧಿ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News