ಎಸಿಬಿ ದಾಳಿ ಪ್ರಕರಣ: ಉಡುಪಿ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಮನೆಯಲ್ಲಿ ಗರಿ ಗರಿ ನೋಟು !

Update: 2019-03-18 15:55 GMT

ಬೆಂಗಳೂರು, ಮಾ.18: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ಎಸಿಬಿ ತನಿಖಾಧಿಕಾರಿಗಳು ಉಡುಪಿ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಮನೆ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ 70.18 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಮಂಗಳೂರಿನಲ್ಲಿ ವಾಸ್ತವ್ಯ ಇರುವ ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಆರ್.ಎಂ. ವರ್ಣೇಕರ್ ಅವರ ಮನೆಯಲ್ಲಿ 70.18 ಲಕ್ಷದ ನಗದು, ಮನೆ, ನಿವೇಶನ, ಜಮೀನು ಅಪಾರ ಮೌಲ್ಯದ ಆಸ್ತಿ ದಾಖಲೆ ಪತ್ರ ಹಾಗೂ ಬ್ಯಾಂಕ್ ಲಾಕರ್‌ನ 2 ಕೀ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

ಏನಿದು ಪ್ರಕರಣ?: ಉಡುಪಿ ಜಿಲ್ಲಾ ಕಾರ್ಕಳ ತಾಲೂಕಿನ ವಿಘ್ನೇಶ್ ಎಂಬುವರ ಕಾರು, ಬೆಂಗಳೂರಿನಲ್ಲಿ ನಡೆದ ಏರ್ ಶೋ ಸಮಯದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಅಗ್ನಿಗಾಹುತಿಯಾಗಿತ್ತು. ಕಾರಿಗೆ ಈಗಾಗಲೇ ಪಾವತಿಸಿರುವ ರಸ್ತೆ ತೆರಿಗೆ ಮೊತ್ತ ಸುಮಾರು 65 ಸಾವಿರ ಹಣ ವಾಪಾಸ್ಸು ಪಡೆಯಲು ಪ್ರಾದೇಶಿಕ ಸಾರಿಗೆ ಉಪ ಆಯುಕ್ತ ಆರ್.ಎಂ. ವರ್ಣೇಕರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಪಿ ವರ್ಣೇಕರ್, ಅರ್ಜಿ ನೀಡಲು 6.5 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಅಷ್ಟೇ ಅಲ್ಲದೆ, ತನ್ನ ಕಚೇರಿಯ ಮುನಾಫ್ ಎಂಬಾತನೊಂದಿಗೆ ವ್ಯವಹರಿಸುವಂತೆ ಹೇಳಿದ್ದರು.

ಬಳಿಕ, ಮಾ.16ರಂದು ಆರೋಪಿ ಆರ್.ಎಂ.ವರ್ಣೇಕರ್ ಅವರು 4 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕಚೇರಿಯಲ್ಲಿ ಸಂಗ್ರಹಿಸಿದ್ದ 30 ಸಾವಿರ ರೂ. ಮೊತ್ತವನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಎಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News