ಇಂದಿರಾ ಕ್ಯಾಂಟೀನ್ ನಲ್ಲಿ ವಿಷಕಾರಿ ಆಹಾರ: ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಗಂಭೀರ ಆರೋಪ

Update: 2019-03-18 16:50 GMT

ಬೆಂಗಳೂರು, ಮಾ.18: ಇಂದಿರಾ ಕ್ಯಾಂಟೀನ್‌ನಿಂದ ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರ ವಿಷಕಾರಿಯಾಗಿದ್ದು, ಇದಕ್ಕೆ ಬಿಬಿಎಂಪಿಯ ನಿರ್ಲಕ್ಷವೇ ಕಾರಣ ಎಂದು ಗೋವಿಂದರಾಜನಗರ ವಾರ್ಡ್ ಬಿಬಿಎಂಪಿ ಸದಸ್ಯ ಉಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ನೀಡುವ ಆಹಾರವನ್ನು ರಾಮಯ್ಯ ಆಸ್ಪತ್ರೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರು ವೈದ್ಯಕೀಯ ಪರೀಕ್ಷೆ ಮಾಡಿದಾಗ ವಿಷಕಾರಿ ಅಂಶಗಳಾದ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಮನುಷ್ಯರು ತಿನ್ನಲು ಯೋಗ್ಯವೇ ಇಲ್ಲ ಎಂದು ವರದಿ ನೀಡಿದ್ದಾರೆ ಎಂದರು. ವಿಷಕಾರಿ ಆಹಾರ ಸೇವನೆ ಮಾಡಿದರೆ ಪೌರಕಾರ್ಮಿಕರಿಗೆ ವಾಂತಿ-ಭೇದಿ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಉಳಿದ ಆಹಾರವಾದ ಅನ್ನ, ಸಾಂಬರ್ ಅನ್ನು ಪೌರಕಾರ್ಮಿಕರಿಗೆ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಕೊಡುವ ಆಹಾರವನ್ನು ಬಣ್ಣ ಹಚ್ಚುವ(ಪೈಂಟ್) ಡಬ್ಬಿಗಳಲ್ಲಿ ಹಾಗೂ ಸ್ವಚ್ಛತೆ ಇಲ್ಲದಿರುವ ಆಹಾರ ಕೊಟ್ಟಿದ್ದಾರೆ ಎಂದು ದೂರಿದರು.

16 ಸಾವಿರ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಊಟ ನೀಡಲಾಗುತ್ತಿದೆ ಎಂಬ ಲೆಕ್ಕ ಇದೆ. ಆದರೆ, ಎರಡು ಸಾವಿರ ಪೌರಕಾರ್ಮಿಕರೂ ಊಟ ಮಾಡುತ್ತಿಲ್ಲ. ಸುಳ್ಳು ಲೆಕ್ಕ ನೀಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂದು ಅವರು, ಚೆಫ್ಟಾಕ್ ಮತ್ತು ರೀವಾರ್ಡ್ ಕಂಪೆನಿಗಳು ಪೌರ ಕಾರ್ಮಿಕರಿಗೆ ಊಟ ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದು, ಇದರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತನಿಖೆಗೆ ಆದೇಶ: ಪರಮೇಶ್ವರ್

ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾನು ಎರಡು-ಮೂರು ಬಾರಿ ಊಟ ಮಾಡಿದ್ದೇನೆ. ರುಚಿ-ಶುಚಿ ಕಾಪಾಡಲು ಸೂಚಿಸಿದ್ದೇನೆ ಎಂದರು.

ಆಹಾರ ಗುಣಮಟ್ಟದ ಕುರಿತು ಮಾಧ್ಯಮ ವರದಿ ಬಳಿಕ ಈ ಬಗ್ಗೆ ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ 198 ವಾರ್ಡ್‌ಗಳಲ್ಲಿನ ಎಲ್ಲ ಕ್ಯಾಂಟಿನ್‌ಗಳಲ್ಲಿಯೂ ಆಹಾರದ ಗುಣಮಟ್ಟ ಪರೀಕ್ಷಿಸುವಂತೆಯೂ ನಿರ್ದೇಶನ ನೀಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News