ಕೇರಳದಲ್ಲಿ ‘ವೆಸ್ಟ್‌ನೈಲ್’ ತಲ್ಲಣ: ಮಾರಣಾಂತಿಕ ವೈರಸ್ ಗೆ ಬಾಲಕ ಬಲಿ

Update: 2019-03-18 17:21 GMT

ಕಲ್ಲಿಕೋಟೆ,ಮಾ.17: ಕೇರಳದಲ್ಲಿ ಭೀತಿಯನ್ನು ಸೃಷ್ಟಿಸಿರುವ ‘ವೆಸ್ಟ್‌ನೈಲ್’ ವೈರಸ್ ಗೆ ಸೋಮವಾರ ಮಲಪ್ಪುರಂ ಜಿಲ್ಲೆಯ ಓರ್ವ ಬಾಲಕ ಬಲಿಯಾಗಿದ್ದಾನೆ. ವೆಸ್ಟ್‌ನೈಲ್ ವೈರಸ್ ಸೋಂಕಿನಿಂದ ಪೀಡಿತನಾಗಿದ್ದ ಏಳು ವರ್ಷದ ಮುಹಮ್ಮದ್ ಶಾನ್ ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್‌ನ ಆಸ್ಪತ್ರೆಯಲ್ಲಿ ಮುಂಜಾನೆ 3:00 ಗಂಟೆಗೆ ಕೊನೆಯುಸಿರೆಳೆದಿದ್ದಾನೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 ಬಾಲಕನ ಸಾವಿನ ಹಿನ್ನೆಲೆಯಲ್ಲಿ ಕೇರಳ ಸರಕಾರವು ಉತ್ತರ ಮಲಬಾರ್ ಪ್ರಾಂತದಲ್ಲಿ ಈ ಮಾರಣಾಂತಿಕ ರೋಗದ ವಿರುದ್ಧ ಹೈಅಲರ್ಟ್ ಘೋಷಿಸಿದೆ.

  ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿದ್ದ ಮುಹಮ್ಮದ್ ಶಾನ್‌ನ ದೇಹಸ್ಥಿತಿ ಕಳೆದ ಎರಡು ದಿನಗಳಿಂದ ಸುಧಾರಿಸಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ಅಳವಡಿಸಿರುವ ಕೃತಕ ಉಸಿರಾಟ ವ್ಯವಸ್ಥೆಯನ್ನು ತೆಗೆದುಹಾಕುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಸೋಮವಾರ ಮುಂಜಾನೆ ಶಾನ್‌ನ ದೇಹಸ್ಥಿತಿ ಹದಗೆಟ್ಟಿತೆನ್ನಲಾಗಿದೆ.

ಕಳೆದ ಹತ್ತು ದಿನಗಳಲ್ಲಿ ಈ ಬಾಲಕನನ್ನು ಪ್ರತ್ಯೇಕ (ಐಸೋಲೇಶನ್) ವಾರ್ಡ್‌ನಲ್ಲಿರಿಸಲಾಗಿತ್ತು ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ವಿಶ್ವ ಆರೋಗ್ಯಸಂಸ್ಥೆಯ ಶಿಷ್ಟಾಚಾರದ ಪ್ರಕಾರ ಈ ರೋಗಕ್ಕೆ ಸಂಬಂಧಿಸಿ ಉತ್ತರ ಮಲಬಾರ್ ಪ್ರಾಂತದಲ್ಲಿ ವೈದ್ಯಕೀಯ ಕಟ್ಟೆಚ್ಚರ ಘೋಷಿಸಿರುವುದಾಗಿ ಅವರು ತಿಳಿಸಿದರು. ಈ ಮಾರಣಾಂತಿಕ ರೋಗವನ್ನು ನಿಯಂತ್ರಿಸುವ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಆರೋಗ್ಯ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದರು.

 ಅಮೆರಿಕ ಮೂಲದ ರೋಗನಿಯಂತ್ರಣ ಹಾಗೂ ಪ್ರತಿಬಂಧಕ ಕೇಂದ್ರದ ಪ್ರಕಾರ, ಮಾರಣಾಂತಿಕ ವೆಸ್ಟ್‌ನೈಲ್ ವೈರಸ್, ಸೊಳ್ಳೆಗಳ ಮೂಲಕ ಮಾನವನಿಗೆ ವರ್ಗಾವಣೆಯಾಗುತ್ತದೆ. ಈ ರೋಗದ ಸೋಂಕು ಹರಡುವುದನ್ನು ತಡೆಯಲು ಅಥವಾ ಚಿಕಿತ್ಸೆಗೆ ಯಾವುದೇ ಲಸಿಕೆ ಅಥವಾ ಔಷಧಿಯನ್ನು ಈವರೆಗೆ ಕಂಡುಹಿಡಿಯಲಾಗಿಲ್ಲ ಎನ್ನಲಾಗಿದೆ.

ಕೇರಳದಲ್ಲಿ ನೈಲ್ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಾಮರ್ಶೆಗಾಗಿ ಕೇಂದ್ರ ಸರಕಾರವು ಮಾರ್ಚ್ 14ರಂದು ತಂಡವೊಂದನ್ನು ರಾಜ್ಯಕ್ಕೆ ರವಾನಿಸಿತ್ತು. ಕೇಂದ್ರ ಆರೋಗ್ಯ ಸಚಿವ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಿರಿಸಿದ್ದಾರೆಂದು ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News