ಸೌದಿ ಭಿನ್ನಮತೀಯರ ವಿರುದ್ಧ ರಹಸ್ಯ ಕಾರ್ಯಾಚರಣೆಗೆ ಯುವರಾಜ ಆದೇಶ: ‘ನ್ಯೂಯಾರ್ಕ್ ಟೈಮ್ಸ್’ ವರದಿ

Update: 2019-03-18 17:47 GMT

ವಾಶಿಂಗ್ಟನ್, ಮಾ. 18: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಒಂದು ವರ್ಷಕ್ಕಿಂತಲೂ ಮೊದಲು, ಭಿನ್ನಮತೀಯರ ಬಾಯಿಮುಚ್ಚಿಸುವ ರಹಸ್ಯ ಕಾರ್ಯಾಚರಣೆಯೊಂದಕ್ಕೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅನುಮೋದನೆ ನೀಡಿದ್ದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ರವಿವಾರ ವರದಿ ಮಾಡಿದೆ.

ಭಿನ್ನಮತೀಯ ಸೌದಿ ಪ್ರಜೆಗಳ ಮೇಲೆ ಕಣ್ಗಾವಲು ಇಡುವುದು, ಅವರನ್ನು ಅಪಹರಿಸುವುದು, ಬಂಧನದಲ್ಲಿರಿಸುವುದು ಹಾಗೂ ಹಿಂಸೆ ನೀಡುವುದು ಈ ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಈ ಕುರಿತ ರಹಸ್ಯ ಗುಪ್ತಚರ ವರದಿಗಳನ್ನು ಓದಿರುವ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಯಲ್ಲಿ ಕಳೆದ ವರ್ಷದ ಅಕ್ಟೋಬರ್ 2 ರಂದು ಖಶೋಗಿಯನ್ನು ಹತ್ಯೆಗೈದ ತಂಡದ ಸದಸ್ಯರು, ಹಲವು ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿದ್ದರು. ಹಾಗಾಗಿ, ಅವರ ಹತ್ಯೆಯನ್ನು ಭಿನ್ನಮತೀಯರ ವಿರುದ್ಧದ ವಿಶಾಲ ಅಭಿಯಾನದ ಒಂದು ಭಾಗವಾಗಿ ಪರಿಗಣಿಸಲಾಗಿದೆ ಎಂದು ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಅಂಕಣಕಾರರೂ ಆಗಿದ್ದ ಖಶೋಗಿಯ ಹತ್ಯೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News