ರೈತ-ಕಾರ್ಮಿಕ ಪಕ್ಷದಿಂದ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ

Update: 2019-03-18 18:17 GMT

ಬೆಂಗಳೂರು, ಮಾ.18: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಕರ್ನಾಟಕ ಸ್ವಾಭಿಮಾನಿ ರೈತರ, ಕಾರ್ಮಿಕ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಜಿ.ಎಸ್.ನಾಗರಾಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ಜನಾಂಗಗಳ ಮಧ್ಯೆ ದ್ವೇಷ, ಅಸೂಯೆ, ಮತೀಯ ಭೇದ- ಭಾವ ಮಾಡದೇ ಪರಸ್ಪರ ಸ್ನೇಹದಿಂದ ಎಲ್ಲರರೊಡಗೂಡಿ ಸರ್ವಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪಕ್ಷ ದುಡಿಯುತ್ತದೆ. ಅಲ್ಲದೆ, ಭ್ರಷ್ಟಾಚಾರ ನಿರ್ಮೂಲನೆಗೆ ಮೊದಲ ಆದ್ಯತೆಯನ್ನು ಕೊಟ್ಟು, ಚುನಾಯಿತ ಅವಧಿ ಪೂರೈಸಿದ ನಂತರ ಸರಕಾರದಿಂದ ಕೊಡುವ ಉಚಿತ ಸೇವೆ, ನಿವೃತ್ತಿ ವೇತನ ಇತ್ಯಾದಿ ಪಡೆಯುವುದಿಲ್ಲ ಎಂದು ತಿಳಿಸಿದರು.

ನನ್ನ ಕುಟುಂಬ ವರ್ಗ, ಬಂಧು-ಬಳಗ, ಹಿತೈಷಿಗಳ ಪರವಾಗಿ ಸರಕಾರದ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಹಾಗೂ ಸ್ವಜನ ಪಕ್ಷಪಾತ ಮಾಡುವುದಿಲ್ಲ. ಪ್ರತಿ ವರ್ಷವೂ ನನ್ನ ಸಂಪೂರ್ಣ ಹಣಕಾಸಿನ ವಹಿವಾಟನ್ನು ಸಾರ್ವಜನಿಕವಾಗಿ ಘೋಷಿಸುತ್ತೇನೆ. ಅಲ್ಲದೆ, ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಹೇಳಿದರು.

ಪಕ್ಷದಿಂದ 20ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಗೆದ್ದು ಬಂದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊಸ ಚುನಾಯಿತ ಸರಕಾರ ರಚಿಸುವಲ್ಲಿ ರೈತ ಪ್ರತಿನಿಧಿಗಳ ನಿರ್ಣಾಯಕ ಪಾತ್ರವಿರುತ್ತದೆ. ಮಹಿಳೆಯರ ಬಹುದಿನಗಳ ಬೇಡಿಕೆ ಶೇ.33 ರಷ್ಟು ಮೀಸಲಾತಿಗೆ ರಾಜ್ಯದ ಮತದಾರರು 12 ಮಹಿಳಾ ಸಂಸದರನ್ನು ಆಯ್ಕೆ ಮಾಡುವ ಮೂಲಕ ಮಹಿಳೆಯರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News