2019 ಲೋಕಸಭಾ ಚುನಾವಣೆ: ಮೊದಲ ಹಂತ; ಅಧಿಸೂಚನೆ ಪ್ರಕಟ

Update: 2019-03-18 18:50 GMT

► ನಾಮಪತ್ರ ಸಲ್ಲಿಕೆಗೆ ಮಾ. 25 ಅಂತಿಮ ದಿನ

► ಹಿಂತೆಗೆತಕ್ಕೆ ಮಾ. 28 ಕೊನೆಯ ದಿನ

► ಎಪ್ರಿಲ್ 11ರಂದು ಚುನಾವಣೆ

► ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಯಿಲ್ಲ

ಹೊಸದಿಲ್ಲಿ,ಮಾ.17:ಭಾರತೀಯ ಚುನಾವಣಾ ಆಯೋಗವು ಎಪ್ರಿಲ್ 11ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸೋಮವಾರ ಅಧಿಸೂಚನೆ ಹೊರಡಿಸಿದೆ. 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಅಂದು ಮತದಾನ ನಡೆಯಲಿದೆ.

 ಲೋಕಸಭಾ ಚುನಾವಣೆಯು ಎಪ್ರಿಲ್ 11ರಿಂದ ಮೇ 19ರವರೆಗೆ, ಏಳು ಹಂತಗಳಲ್ಲಿ ನಡೆಯಲಿದ್ದು, ಮತ ಏಣಿಕೆಯು ಮೇ 23ರಂದು ನಡೆಯಲಿದೆ.

ಎಪ್ರಿಲ್ 11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 25 ಅಂತಿಮ ದಿನವಾಗಿದೆ. ಮಾರ್ಚ್ 26ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆತಕ್ಕೆ ಮಾರ್ಚ್ 28 ಕೊನೆಯ ದಿನವಾಗಿದೆ.

ಮೊದಲ ಹಂತದ ಮತದಾನಕ್ಕೆ ತೆರಳಲಿರುವ ರಾಜ್ಯಗಳಲ್ಲಿ ಎಪ್ರಿಲ್ 11ರಂದು ಬೆಳಗ್ಗೆ 7:00 ಗಂಟೆಗೆ ಮತದಾನ ಆರಂಭವಾಗಲಿದೆ. ಉತ್ತರಪ್ರದೇಶ,ಪಶ್ಚಿಮಬಂಗಾಳ, ಜಮ್ಮುಕಾಶ್ಮೀರ, ಅಂಡಮಾನ್ ಹಾಗೂ ನಿಕೋಬಾರ್, ಲಕ್ಷದ್ವೀಪಗಳಲ್ಲಿ ಮತದಾನವು ಸಂಜೆ 6:00 ಗಂಟೆಗೆ ಮುಕ್ತಾಯವಾಗಲಿದೆ. ಉತ್ತರಖಂಡ, ತ್ರಿಪುರ, ಮಿರೆರಾ ರಾಜ್ಯಗಳಲ್ಲಿ ಮತದಾನವು ಸಂಜೆ 5:00 ಗಂಟೆಗೆ ಕೊನೆಗೊಳ್ಳಲಿದೆ. ಮಣಿಪುರ ಹಾಗೂ ಮೇಘಾಲಯಗಳಲ್ಲಿ ಸಂಜೆ 4:00 ಗಂಟೆಗೆ ಮುಗಿಯಲಿದೆ. ಇತರ 10 ರಾಜ್ಯಗಳ ವಿವಿಧ ಕ್ಷೇತ್ರಗಳಲ್ಲಿ ಮತದಾನವು ಮಧ್ಯಾಹ್ನ 3:00 ಗಂಟೆಯಿಂದ ಹಿಡಿದು ಸಂಜೆ 6:00ವರೆಗೆ ಬೇರೆ ಬೇರೆ ಸಮಯಗಳಲ್ಲಿ ಕೊನೆಗೊಳ್ಳಲಿದೆಯೆಂದು ಚುನಾವಣಾ ಆಯೋಗ ತಿಳಿಸಿದೆ.

ಮೊದಲ ಹಂತದ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕರ್ನಾಟಕ ಒಳಗೊಂಡಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಎಪ್ರಿಲ್ 18ರಂದು ನಡೆಯಲಿರುವ ಎರಡನೆ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎಪ್ರಿಲ್ 23ರಂದು ಮೂರನೆ ಹಂತದ ಚುನಾವಣೆಯಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಅಖಿಲಬಾರತ ಮುಜ್ಲಿಸೆ ಇತ್ತೆಹಾದುಲ್ ಮುಸ್ಲಿವಿೂನ್ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಅವರು, ಚುನಾವಣಾ ಅಧಿಸೂಚನೆ ಪ್ರಕಟವಾದ ದಿನವಾದ ಸೋಮವಾದಂದೇ ತಾನು ಪಕ್ಷದ ಅಭ್ಯರ್ಥಿಯಾಗಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News