ಲೈಂಗಿಕ ಕಿರುಕುಳ ಆರೋಪ: ಇಂಟರ್ನಿಯಿಂದ ಸಂಪಾದಕನ ಹತ್ಯೆ

Update: 2019-03-19 04:09 GMT

ಥಾಣೆ, ಮಾ.19: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸುದ್ದಿ ಜಾಲತಾಣ ಹಾಗೂ ನಿಯತಕಾಲಿಕವೊಂದರ ಸಂಪಾದಕನನ್ನು, ಅದೇ ಪತ್ರಿಕೆಯಲ್ಲಿ ಇಂಟರ್ನ್‌ಶಿಪ್ ತರಬೇತಿಯಲ್ಲಿದ್ದ ಮಹಿಳೆ ಹಾಗೂ ಅದೇ ಪತ್ರಿಕೆಯ ಪ್ರಿಂಟರ್ ಸೇರಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಾರ್ಚ್ 15ರಿಂದ ನಾಪತ್ತೆಯಾಗಿದ್ದ ಸಂಪಾದಕ ನಿತ್ಯಾನಂದ ಪಾಂಡೆ (44) ಮೃತದೇಹ ಶನಿವಾರ ಭಿವಂಡಿ ಬಳಿ ಸೇತುವೆಯ ಕೆಳಗೆ ಪತ್ತೆಯಾಗಿತ್ತು.

ಸುದ್ದಿಜಾಲ ತಾಣದಲ್ಲಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಪಾಂಡೆ ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪಾಂಡೆಯ ನಿಯತಕಾಲಿಕವನ್ನು ಮುದ್ರಿಸಿಕೊಡುತ್ತಿದ್ದ ಸತೀಶ್ ಮಿಶ್ರಾ (34) ಎಂಬಾತನ ಜತೆಗೆ ಸೇರಿ ಸಂಪಾದಕನ್ನು ಮಹಿಳೆ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರೂ ಆರೋಪಿಗಳನ್ನು ಸಂಪಾದಕನ ಜತೆಗಿನ ಮೊಬೈಲ್ ಫೋನನ್ನು ಕರೆ ಮಾಹಿತಿ ದಾಖಲೆ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಕ ಎರಡು ವರ್ಷಗಳಿಂದ ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆಪಾದಿಸಲಾಗಿದೆ. ಇದನ್ನು ಪ್ರತಿಭಟಿಸಿದಾಗ ಮಹಿಳೆಗೆ ಭಡ್ತಿ ನೀಡಲು ನಿರಾಕರಿಸಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಈ ಕಿರುಕುಳ ತಡೆಯುವ ಸಲುವಾಗಿ ಮಹಿಳೆ, ಸಹೋದ್ಯೋಗಿ ಮಿಶ್ರಾ ಜತೆ ಸೇರಿ ಈ ಹತ್ಯೆ ಸಂಚು ರೂಪಿಸಿದಳು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಶುಕ್ರವಾರ ಸಂಪಾದಕನ ಕಾರಿನಲ್ಲೇ ಒಂದು ಮನೆ ತೋರಿಸಲು ಆತನನ್ನು ಕರೆದೊಯ್ದು ಮಾರ್ಗ ಮಧ್ಯದಲ್ಲಿ ನಿದ್ರಾಜನಕ ವಸ್ತು ಸೇರಿಸಿದ್ದ ಮದ್ಯ ಕುಡಿಸಿ, ಹಗ್ಗದಿಂದ ಬಿಗಿದು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಸೇತುವೆ ಕೆಳಗೆ ಎಸೆದು ಹೋಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News