ಹಿಂದೂ-ಮುಸ್ಲಿಂ ಕುಟುಂಬಗಳ ಸೌಹಾರ್ದ: ಪರಸ್ಪರರ ಪತಿಯಂದಿರಿಗೆ ಕಿಡ್ನಿ ದಾನ ಮಾಡಿದ ಪತ್ನಿಯರು

Update: 2019-03-19 06:38 GMT

ಮುಂಬೈ, ಮಾ.19: ಈ ಜಗತ್ತಿನಲ್ಲಿ ಮಾನವೀಯತೆಗಿಂತ ಮಿಗಿಲು ಯಾವುದೂ ಇಲ್ಲ ಎಂಬುದನ್ನು  ಬಿಹಾರದ ಹಿಂದು ಕುಟುಂಬ ಹಾಗೂ ಥಾಣೆಯ ಮುಸ್ಲಿಂ ಕುಟುಂಬಗಳು ಸಾಬೀತು ಪಡಿಸಿವೆ.

ಇಬ್ಬರ ಪತ್ನಿಯರೂ ಪರಸ್ಪರ ಒಪ್ಪಿ ಪರಸ್ಪರರ ಪತಿಯಂದಿರಿಗೆ ಕಿಡ್ನಿ ದಾನ ಮಾಡಲು ನಿರ್ಧರಿಸಿದ ಅಪರೂಪದ ಪ್ರಕರಣವಿದು. ಕಿಡ್ನಿ ಕಸಿ ಶಸ್ತ್ರಕ್ರಿಯೆ ಮಾರ್ಚ್ 14ರಂದು ನಡೆದಿದ್ದು ಥಾಣೆಯ ನದೀಂ ಹಾಗೂ ಬಿಹಾರದ  ರಾಮಸ್ವಾರ್ಥ್ ಯಾದವ್ ಅವರ ಪ್ರಾಣ ಉಳಿದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನದೀಂ ಮತ್ತು ರಾಮಸ್ವಾರ್ಥ್ ಅವರಿಬ್ಬರು ನಿಯಮಿತವಾಗಿ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರೂ ಕಿಡ್ನಿ ಕಸಿ ಮಾತ್ರ ಅವರ ಸಮಸ್ಯೆಗೆ ಪರಹಾರವೆಂದು ತಜ್ಞರು ಹೇಳಿದ್ದರು. ಅವರಿಬ್ಬರೂ ಸರಿ ಸುಮಾರು ಒಂದೇ ಸಮಯ ಮುಂಬೈಯ ಕಿಡ್ನಿ ತಜ್ಞರ ಬಳಿ ಬಂದಿದ್ದರು. ಆದರೆ ಇಬ್ಬರ ಪತ್ನಿಯರೂ ತಮ್ಮ ಪತಿಯಂದಿರಿಗೆ ಕಿಡ್ನಿ ದಾನ ಮಾಡಲು ಸಿದ್ಧರಿದ್ದರೂ  ಪರಸ್ಪರ ಹೊಂದಾಣಿಕೆಯಾಗುತ್ತಿರಲಿಲ್ಲ.

ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನೆಫ್ರಾಲಜಿ ವಿಭಾಗದ ತಜ್ಞ ಡಾ. ಹೇಮಲ್ ಶಾ, ರಾಮಸ್ವಾರ್ಥ್ ಅವರ ರಕ್ತದ ಗುಂಪು ನದೀಂ ಪತ್ನಿ ನಝ್ರೀನ್ ಳ ರಕ್ತದ ಗುಂಪಿಗೆ ಹೊಂದಾಣಿಕೆಯಾಗುತ್ತಿದ್ದರೆ, ನದೀಂ ರಕ್ತದ ಗುಂಪು ರಾಮಸ್ವಾರ್ಥ್ ಪತ್ನಿ ಸತ್ಯದೇವಿಯ ರಕ್ತದ ಗುಂಪಿಗೆ ಹೊಂದಾಣಿಕೆಯಾಗಿರುವುದನ್ನು ಗಮನಿಸಿ ಎರಡೂ ಕುಟುಂಬಗಳ ಜತೆ ಮಾತುಕತೆ ನಡೆಸಿದರು. ಸುಮಾರು ಒಂದು ತಿಂಗಳು ಈ ಬಗ್ಗೆ ಚರ್ಚಿಸಿದ ನಂತರ ಎರಡೂ ಕುಟುಂಬಗಳು ಒಪ್ಪಿದ್ದವು. ‘ಇದು ಸಾವು ಬದುಕಿನ ಪ್ರಶ್ನೆ, ಧರ್ಮದ ವಿಚಾರ ಇಲ್ಲಿ ಬಾರದು' ಎಂದು ರಾಮಸ್ವಾರ್ಥ್ ಅವರ ಪುತ್ರ ಸಂಜಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News