ಬೆಂಗಳೂರಿನಾದ್ಯಂತ ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಜ್ಜು: ಟಿ.ಸುನೀಲ್‌ ಕುಮಾರ್

Update: 2019-03-19 13:18 GMT

ಬೆಂಗಳೂರು, ಮಾ.19: ಮೊದಲ ಹಂತದಲ್ಲಿ ನಡೆಯಲಿರುವ ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಜ್ಜುಗೊಂಡಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ.

ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರದಿಂದ ನಗರದ ಮೂರು ಕಡೆಗಳಲ್ಲಿ ಲೋಕಸಭಾ ಚುನಾವಣೆಯ ನಾಮಪತ್ರ ಸ್ವೀಕಾರ ನಡೆಯಲಿದೆ. ಈ ಸ್ಥಳಗಳಲ್ಲಿ ಅಗತ್ಯ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತೆ ವಹಿಸಲಾಗಿದೆ ಎಂದರು.

ಬೆಂಗಳೂರು ಕೇಂದ್ರಕ್ಕೆ ಡಿಸಿಪಿ ರಾಹುಲ್, ಉತ್ತರಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ದಕ್ಷಿಣಕ್ಕೆ ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನಗರದಲ್ಲಿ ಆಯುಧಗಳನ್ನು ಹೊಂದಿರುವವರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಹೇಳಲಾಗಿತ್ತು. ಅದರಂತೆ ನಗರದಾದ್ಯಂತ 9 ಸಾವಿರ ಆಯುಧಗಳಿದ್ದು, ಅದರಲ್ಲಿ ಏಳು ಸಾವಿರ ಆಯುಧಗಳನ್ನು ಈಗಾಗಲೇ ವಾಪಸ್ ನೀಡಲಾಗಿದೆ. ಅಲ್ಲದೆ, ರೌಡಿ ಚಟುವಟಿಕೆಗಳನ್ನು ನಡೆಸುತ್ತಿರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ತಿಳಿಸಿದರು.

ನಗರದಾದ್ಯಂತ ಐದು ಸಾವಿರಕ್ಕೂ ಅಧಿಕ ರೌಡಿಗಳ ಮೇಲೆ ಕಣ್ಣಿಡಲಾಗಿದೆ. ಎಂಟು ವಲಯಗಳಲ್ಲಿ ಎಂಟು ಸಾವಿರ ರೌಡಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಅಲ್ಲದೆ, ವಿವಿಧ ಹಂತದಲ್ಲಿನ ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಈಗಾಗಲೇ 2 ಸಾವಿರ ರೌಡಿಗಳಿಂದ 1 ಲಕ್ಷದಿಂದ ಐದು ಲಕ್ಷದ ರೂ. ಬಾಂಡ್ ಬರೆಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಒತ್ತಡ ಹಾಕುವುದು, ಒಬ್ಬರಿಗೆ ಮತ ಹಾಕುವಂತೆ ಪ್ರೇರೆಪಿಸುವುದು ಸೇರಿದಂತೆ ಚುನಾವಣಾ ಅಕ್ರಮದಲ್ಲಿ ಪಾಲ್ಗೊಳ್ಳುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು ಪೂರ್ವ ವಿಭಾಗದಲ್ಲಿ ಒಬ್ಬ ರೌಡಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1.68 ಕೋಟಿ ರೂ.ಗಳಷ್ಟು ನಗದು, 84 ಸಾವಿರಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

-ಟಿ.ಸುನೀಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News