ರಾಹುಲ್ ಗಾಂಧಿ ಸಂವಾದ ವೇಳೆ ಲಾಠಿ ಚಾರ್ಜ್: ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು

Update: 2019-03-19 15:30 GMT

ಬೆಂಗಳೂರು, ಮಾ.19: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಸಂವಾದ ನಡೆಸುತ್ತಿದ್ದ ವೇಳೆ ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಐಟಿ ಉದ್ಯೋಗಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಆರ್.ಅಶೋಕ್ ನೇತೃತ್ವದ ನಿಯೋಗವು ಮಂಗಳವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಆ ನಂತರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಗೂಂಡಾಗಳಂತೆ ಐಟಿ ಉದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾರೆ. ಟೆಕ್ಕಿಗಳು ತಮ್ಮ ಅನಿಸಿಕೆಯಂತೆ ಮತ್ತೊಮ್ಮೆ ಮೋದಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅದು ಅವರ ವಾಕ್ ಸ್ವಾತಂತ್ರ ಎಂದರು.

ಪ್ರಧಾನಮಂತ್ರಿಗೆ ಜೈ ಅಂದಿದಕ್ಕೆ ಅವರನ್ನು ವಶಕ್ಕೆ ಪಡೆದ ಪೊಲೀಸರು, ರಾತ್ರಿ 10 ಗಂಟೆಯವರೆಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲೇ ಈ ರೀತಿಯಾದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ರಾಹುಲ್ ಗಾಂಧಿ ಸಂವಾದದ ಸಂದರ್ಭದಲ್ಲಿ ಮೋದಿ ಪರವಾಗಿ ಘೋಷಣೆಗಳನ್ನು ಕೂಗಿದವರು ಯಾರೂ ಕೂಡ ಬಿಜೆಪಿ ಕಾರ್ಯಕರ್ತರಲ್ಲ. ಅವರೆಲ್ಲ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಈ ಘಟನೆಗೆ ಕಾರಣಕರ್ತರಾದವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ನಾವು ಮನವಿ ಮಾಡಿದ್ದೇವೆ ಎಂದು ಅಶೋಕ್ ಹೇಳಿದರು.

ಈ ವೇಳೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್, ಬಿಜೆಪಿ ಸಹ ವಕ್ತಾರರಾದ ಎಸ್.ಪ್ರಕಾಶ್, ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News