ಅಕ್ರಮ ಆಸ್ತಿ ಸಂಪಾದನೆ ಆರೋಪ: 10 ಕಡೆ ಎಸಿಬಿ ದಾಳಿ

Update: 2019-03-19 16:47 GMT

ಬೆಂಗಳೂರು, ಮಾ.19: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖಾಧಿಕಾರಿಗಳು, ರಾಜ್ಯದ 4 ಸರಕಾರಿ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಹತ್ತು ಸ್ಥಳಗಳಲ್ಲಿ ದಾಳಿ ನಡೆಸಿ, ತನಿಖೆ ಮುಂದುವರೆಸಿದ್ದಾರೆ.

ಸಹಕಾರ ಸಂಘಗಳ ಅಪರ ನಿಬಂಧಕ ಬಿ.ಸಿ.ಸತೀಶ್ ಅವರ ಬೆಂಗಳೂರಿನಲ್ಲಿರುವ ಕಚೇರಿ ಸೇರಿದಂತೆ ಮನೆ ಮೇಲೆ ಎಸಿಬಿ ದಾಳಿ ನಡೆಸಿ, ಆಸ್ತಿ ದಾಖಲೆ ಸಂಗ್ರಹಿಸುತ್ತಿದೆ. ಅದೇ ರೀತಿ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮ ಉಪ ನಿರ್ದೇಶಕ ಶರದ್ ಗಂಗಪ್ಪ ಇಜ್ರಿ ಅವರ ವಿಜಯಪುರ ನಗರದಲ್ಲಿನ ನಿವಾಸ, ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಗದಗ ಜಿಲ್ಲೆಯ ಮಂಡರಗಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ, ಅವರ ಎರಡು ವಾಸದ ಮನೆ, ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೂ ದಾಳಿ ನಡೆಸಿ, ಶೋಧ ಕಾರ್ಯ ಮುಂದುವರೆಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಜೆಬಿ ನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಎಸ್.ಬಿ.ಮಂಜುನಾಥ್ ಅವರ ಬೆಂಗಳೂರಿನ ಮನೆ, ಚನ್ನರಾಯಪಟ್ಟಣದಲ್ಲಿನ ಸಂಬಂಧಿಕರ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News