ವಕೀಲೆ ಧರಣಿ ಆತ್ಮಹತ್ಯೆಯ ತನಿಖೆಯಲ್ಲಿ ತಪ್ಪು ನಡೆದಿದೆ: ಹೈಕೋರ್ಟ್‌ಗೆ ಸಿಐಡಿ ಪರ ವಕೀಲರ ಹೇಳಿಕೆ

Update: 2019-03-19 16:50 GMT

ಬೆಂಗಳೂರು, ಮಾ.19: ಯುವ ವಕೀಲೆ ಎಸ್.ಧರಣಿ ಆತ್ಮಹತ್ಯೆ ಪ್ರಕರಣದ ತನಿಖೆಯ ವಿಚಾರದಲ್ಲಿ ಅಧಿಕಾರಿಗಳಿಂದ ತಪ್ಪು ನಡೆದಿದೆ ಎಂದು ಸಿಐಡಿ ಪರ ವಕೀಲರು ಹೈಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ತನಿಖೆಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಸಿಐಡಿ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಸಿಐಡಿ ಪರ ವಾದಿಸಿದ ವಕೀಲರು, ಎಸ್.ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಎ.ನಾರಾಯಣಪುರ ವಾರ್ಡ್‌ನ ಸದಸ್ಯ ವಿ.ಸುರೇಶ್ ಸೇರಿ ಇನ್ನಿತರ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡವು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಧರಣಿ ಆತ್ಮಹತ್ಯೆ ಪ್ರಕರಣವು ಸಿಸಿಬಿಯಿಂದ ಸಿಐಡಿಗೆ ವರ್ಗವಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯೂ ಕಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಎಸ್.ಧರಣಿ ಅವರು ಪ್ರಕರಣ ದಾಖಲಿಸಿದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ. ಯಾಕೆ ಆತ್ಮಹತ್ಯೆಯನ್ನು ತಡೆಗಟ್ಟಲಿಲ್ಲ ಎಂದು ಸಿಐಡಿ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಐಡಿ ಪರ ವಕೀಲರು ನಮ್ಮಿಂದ ತಪ್ಪು ನಡೆದಿದೆ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಮುಂದಿನ ವಿಚಾರಣೆ ವೇಳೆ ಇಲ್ಲಿಯವರೆಗೆ ಸಿಐಡಿ ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ಸಿಐಡಿಗೆ ಸೂಚಿಸಿ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News