ಎಚ್‌ಬಿಎಸ್ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಹೃದಯ ಶಸ್ತ್ರಚಿಕಿತ್ಸೆ: ಡಾ.ತಾಹಾ ಮತೀನ್

Update: 2019-03-19 17:03 GMT

ಬೆಂಗಳೂರು, ಮಾ.19: ಬಡ-ಸಾಮಾನ್ಯ ವರ್ಗದ ಹೃದಯ ಸಂಬಂಧಿ ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಎಚ್‌ಬಿಎಸ್ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ತಾಹಾ ಮತೀನ್ ಇಂದಿಲ್ಲಿ ತಿಳಿಸಿದರು.

ಮಂಗಳವಾರ ಶಿವಾಜಿನಗರದಲ್ಲಿರುವ ಎಚ್‌ಬಿಎಸ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡ ವರ್ಗದ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಸಂಬಂಧ ತಮ್ಮ ಆಸ್ಪತ್ರೆ ಮೂಲಕ ಹೆಚ್ಚಾಗಿ ಬಡ ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಕಡು ಬಡವರಿಗೆ ದಾನಿಗಳ ಸಹಾಯದಿಂದ ಉಚಿತವಾಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದರು.

ಎಚ್‌ಬಿಎಸ್ ಆಸ್ಪತ್ರೆಯಲ್ಲಿ ಈಗ ಆರಂಭವಾಗಿರುವ ನೂತನ ಹೃದಯ ಶಸ್ತ್ರಚಿಕಿತ್ಸ ಘಟಕವನ್ನು ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ದಾನಿಗಳ ನೆರವಿನಲ್ಲಿ ಸ್ಥಾಪಿಸಲಾಗಿದೆ. ಸಮಾಜ ಸೇವಕಿ ಆಮೀನಾ ಹಾಗೂ ಹಲಾಯಿ ಮೆಮನ್ ಜಮಾತ್ ಈ ಯೋಜನೆಗೆ ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡಿದೆ ಎಂದು ಮಾಹಿತಿ ಅವರು ನೀಡಿದರು.

ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ.ತಮೀಮ್ ಅಹ್ಮದ್ ನೇತೃತ್ವದಲ್ಲಿ ನುರಿತ ಹೃದ್ರೋಗ ವೈದ್ಯರ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, 2012ನೆ ಸಾಲಿನಲ್ಲಿ ಶಮಾ ಚಾರಿಟಬಲ್ ಟ್ರಸ್ಟ್ ನಿರ್ವಹಣೆಯಲ್ಲಿ ಆರಂಭವಾದ ಈ ಆಸ್ಪತ್ರೆಯಲ್ಲಿ ಇದುವರೆಗೂ ಸುಮಾರು 4 ಲಕ್ಷ ಹೊರ ರೋಗಿಗಳು, 20 ಸಾವಿರ ಒಳರೋಗಿಗಳು, 2 ಸಾವಿರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳ ಮೂಲಕ ಆರೋಗ್ಯ ಸೇವೆ ನೀಡುತ್ತಿದೆ ಎಂದು ವಿವರಿಸಿದರು.

ಅದೇ ರೀತಿ, ಸುಮಾರು 2013ನೆ ಸಾಲಿನಲ್ಲಿ ಆರಂಭವಾದ ಡಯಾಲಿಸಿಸ್ ವಿಭಾಗದಲ್ಲಿ ವಾರ್ಷಿಕ ಸುಮಾರು 40 ಸಾವಿರ ರೋಗಿಗಳಿಗೆ ಡಯಾಲಿಸಿಸ್ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್ ಮಾಡುವ ಕೇಂದ್ರ ಎಂಬ ಹೆಗ್ಗಳಿಕೆಗೆ ಎಚ್‌ಬಿಎಸ್ ಆಸ್ಪತ್ರೆ ಪಾತ್ರವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ತಮೀಮ್ ಅಹ್ಮದ್, ಡಾ.ಝಫರುಲ್ ಹಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News