ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ: ರಾಹುಲ್ ಗಾಂಧಿ

Update: 2019-03-19 17:07 GMT

ಇಟಾನಗರ್, ಮಾ. 19: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಅರುಣಾಚಲ ಪ್ರದೇಶ ಹಾಗೂ ಈಶಾನ್ಯದ ಇತರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಇಟಾನಗರದಲ್ಲಿ ಮಂಗಳವಾರ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ವಿಶಿಷ್ಟ ಸಮಸ್ಯೆಗಳು ಹಾಗೂ ಸಂಪರ್ಕ, ಭೂಪ್ರದೇಶ, ಮೂಲ ಸೌಕರ್ಯದಂತಹ ತೊದರೆಗಳಿಂದಾಗಿ ದೇಶದ ಕೆಲವು ರಾಜ್ಯಗಳಿಗೆ ವಿಶೇಷ ಸ್ಥಾನ ಮಾನದ ಅಗತ್ಯತೆ ಇದೆ ಎಂದು ಅವರು ಹೇಳಿದರು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭ ಅರುಣಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳು ವಿಶೇಷ ಸ್ಥಾನಮಾನದ ಸೌಲಭ್ಯ ಪಡೆದುಕೊಂಡಿವೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಇದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಬಿಜೆಪಿ ತೀವ್ರ ಟೀಕೆಗೆ ಗುರಿಯಾಗಿರುವ ವಿವಾದಾತ್ಮಕ ನಾಗರಿಕತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸರಕಾರ ಮಂಜೂರು ಮಾಡದು ಎಂದು ರಾಹುಲ್ ಗಾಂಧಿ ಹೇಳಿದರು. ಈ ಮಸೂದೆ ಈಶಾನ್ಯ ಜನರಿಗೆ ಹಾನಿಕರ ಎಂದು ಕರೆದಿರುವ ಅವರು, ಈಶಾನ್ಯದ ಜನರನ್ನು ನಿಗ್ರಹಿಸಲು ಕಾಂಗ್ರೆಸ್ ಎಂದಿಗೂ ಅವಕಾಶ ನೀಡದು ಎಂದರು. ಅರುಣಾಚಲಪ್ರದೇಶ ಹಾಗೂ ಈಶಾನ್ಯ ರಾಜ್ಯಗಳ ದೇಶಿ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ನಂಬಿಕೆಯ ಮೇಲೆ ಕಾಂಗ್ರೆಸ್ ಎಂದಿಗೂ ದಾಳಿ ನಡೆಸದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News