ಕಾನೂನು ಬಾಹಿರವಾಗಿ ಬದಲಿ ನಿವೇಶನಗಳ ಹಂಚಿಕೆ: ಎನ್.ಆರ್.ರಮೇಶ್ ಆರೋಪ

Update: 2019-03-19 17:12 GMT

ಬೆಂಗಳೂರು, ಮಾ.19: ಬಿಬಿಎಂಪಿ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಕಾನೂನು ಬಾಹಿರವಾಗಿ 600 ಕೋಟಿ ರೂ. ಮೌಲ್ಯದ 245 ನಿವೇಶನಗಳನ್ನು ಬದಲಿ ನಿವೇಶನಗಳ ಹೆಸರಲ್ಲಿ ಹಂಚಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿರುವ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ 6 ವರ್ಷದ ಅವಧಿಯಲ್ಲಿ ಸುಮಾರು 600 ಕೋಟಿ ರೂ. ಅಧಿಕ ಮೌಲ್ಯದ 245 ಬದಲಿ ನಿವೇಶನಗಳನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.

ಮಹಾನಗರದಲ್ಲಿ ಬಿಡಿಎ ನಿರ್ಮಿಸಿರುವ ಅತ್ಯಂತ ಪ್ರಮುಖ ಬಡಾವಣೆಗಳಾದ ಎಚ್‌ಎಸ್‌ಆರ್ ಬಡಾವಣೆ, ಜ್ಞಾನಭಾರತಿ ಬಡಾವಣೆ, ಬನಶಂಕರಿ 6ನೇ ಹಂತ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿನ 245 ಮುಖ್ಯ ನಿವೇಶನಗಳನ್ನು 2012ರಿಂದ 2016ರವರೆಗೆ ಬಿಡಿಎ ಆಯುಕ್ತರಾಗಿದ್ದ ಶ್ಯಾಂಭಟ್ ಸಹಕಾರದಲ್ಲಿ ಪಡೆದಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಭಾಗಿ: ಶ್ಯಾಂಭಟ್ ಸೇರಿದಂತೆ ನಾಲ್ವರು ಉಪಕಾರ್ಯದರ್ಶಿಗಳು ಮತ್ತು ಸ್ವಾಧೀನಾಧಿಕಾರಿಗಳ ನೆರವಿನಿಂದ ಹೊಸ ಬಡಾವಣೆಯ ನಿರ್ಮಾಣಕ್ಕೆ ಸ್ವಾಧೀನವಾಗುವ ಜಮೀನುಗಳ ಬಗ್ಗೆ ಮೊದಲೇ ಮಾಹಿತಿ ಪಡೆದು ರೈತರನ್ನು ದಿಕ್ಕು ತಪ್ಪಿಸಿ ಅವರಿಂದ ಜಮೀನುಗಳನ್ನು ಹನುಮಂತೇಗೌಡ ಅವರ ಪತ್ನಿ ಲತಾ ಸೇರಿದಂತೆ ಕುಟುಂಬಸ್ಥರ ಹೆಸರಿನಲ್ಲಿ ಜಿಪಿಎ ಮೂಲಕ ಕ್ರಯಕ್ಕೆ ಪಡೆದುಕೊಂಡಿದ್ದಾರೆ.

ಆಯಾ ಬಡಾವಣೆಗಳಲ್ಲಿ ಪರಿಹಾರದ ರೂಪದಲ್ಲಿ ದೊರೆಯುವಂತಹ ಪ್ರತಿ ಎಕರೆಯೊಂದಕ್ಕೆ 6 ಸಾವಿರ ಚದುರಡಿ ಅಳತೆಯ ನಿವೇಶನದ ಬದಲಾಗಿ ಈಗಾಗಲೇ ಅಭಿವೃದ್ಧಿ ಹೊಂದಿರುವ ಬಡಾವಣೆಗಳಲ್ಲಿ ಖಾಲಿ ನಿವೇಶನಗಳನ್ನು ಬದಲೀ ನಿವೇಶನ ರೂಪದಲ್ಲಿ ಪಡೆದಿದ್ದಾರೆ ಎಂದರು.

ಕಾನೂನು ಬಾಹಿರ ನಿವೇಶನ ಹಂಚಿಕೆ: ಬಿಡಿಎ 1984ರ 11/ಎ ಅನುಗುಣವಾಗಿ ಯಾವುದೇ ಬದಲಿ ನಿವೇಶನ ನೀಡಬೇಕಾದರೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ರಚನೆಯಾಗುವ ಬಡಾವಣೆಯಲ್ಲಿ ಅಥವಾ ಆ ನಂತರ ರಚನೆಯಾಗುವ ಬಡಾವಣೆಗಳಲ್ಲಿ ಮಾತ್ರವೇ ನೀಡಬೇಕು. ಅದಕ್ಕೂ ಹಿಂದೆ ರಚನೆಯಾಗಿರುವ ಬಡಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬದಲೀ ನಿವೇಶನ ಹಂಚಿಕೆ ಮಾಡುವಂತಿಲ್ಲ. ಆದರೆ ಕಾನೂನು ಬಾಹಿರವಾಗಿ ಬದಲೀ ನಿವೇಶನ ಪಡೆದಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News