ಮೊಝಾಂಬಿಕ್‌ಗೆ ಅಪ್ಪಳಿಸಿದ ಭೀಕರ ಚಂಡಮಾರುತ: 1,000ಕ್ಕೂ ಅಧಿಕ ಸಾವು

Update: 2019-03-19 17:29 GMT

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಮಾ. 19: ಮೊಝಾಂಬಿಕ್ ದೇಶಕ್ಕೆ ಚಂಡಮಾರುತ ಅಪ್ಪಳಿಸಿದ ನಾಲ್ಕು ದಿನಗಳ ಬಳಿಕ, ಆ ದೇಶದಲ್ಲಿ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಚಂಡಮಾರುತದಿಂದ ಉದ್ಭವಿಸಿದ ಪ್ರವಾಹವು ಇಡೀ ಗ್ರಾಮಗಳನ್ನು ಆವರಿಸಿದ್ದು, ದೇಹಗಳು ಪ್ರವಾಹದ ನೀರಿನಲ್ಲಿ ತೇಲುತ್ತಿವೆ.

‘‘ಇದು ಅತ್ಯಂತ ವಿನಾಶಕಾರಿ ವಿಪತ್ತು’’ ಎಂದು ಮೊಝಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯೂಸಿ ಹೇಳಿದ್ದಾರೆ.

‘ಇಡೈ’ ಚಂಡಮಾರುತವು ಆಫ್ರಿಕದ 3 ಕೋಟಿ ಜನಸಂಖ್ಯೆಯ ಬಡ ದೇಶಕ್ಕೆ ಈವರೆಗೆ ಅಪ್ಪಳಿಸಿದ ಚಂಡಮಾರುತಗಳಲ್ಲೇ ಅತ್ಯಂತ ಭೀಕರವಾಗಿದೆ ಎನ್ನಲಾಗಿದೆ.

ಈ ಚಂಡಮಾರುತವು ಕಳೆದ ಗುರುವಾರ ರಾತ್ರಿ ಹಿಂದೂ ಮಹಾಸಾಗರದ ಬಂದರು ನಗರ ಬೈರಾಕ್ಕೆ ಅಪ್ಪಳಿಸಿತು ಹಾಗೂ ಬಳಿಕ ಜಿಂಬಾಬ್ವೆ ಮತ್ತು ಮಲಾವಿ ದೇಶಗಳತ್ತ ಚಲಿಸಿತು. ಅದರ ದಾರಿಯುದ್ದಕ್ಕೂ ಬಲವಾದ ಗಾಳಿ ಬೀಸಿತು ಹಾಗೂ ಭಾರೀ ಮಳೆ ಸುರಿಯಿತು.

 ಆದರೆ, ಈ ಚಂಡಮಾರುತವು ಮೊಝಾಂಬಿಕ್‌ನಲ್ಲಿ ಸೃಷ್ಟಿಸಿದ ವಿನಾಶವು ಜಗತ್ತಿನ ಗಮನಕ್ಕೆ ಬರಲು ಹಲವು ದಿನಗಳೇ ಬೇಕಾದವು. ಮೊಝಾಂಬಿಕ್‌ನಲ್ಲಿನ ಕಳಪೆ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಭ್ರಷ್ಟ ಮತ್ತು ಅದಕ್ಷ ಅಧಿಕಾರಶಾಹಿ ಇದಕ್ಕೆ ಕಾರಣ.

 ಸರಕಾರಿ ಒಡೆತನದ ‘ರೇಡಿಯೊ ಮೊಝಾಂಬಿಕ್’ನಲ್ಲಿ ಮಾತನಾಡಿದ ಫಿಲಿಪ್ ನ್ಯೂಸಿ, ‘‘ಪ್ರಾಕೃತಿಕ ವಿಕೋಪದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ 84 ಆಗಿದೆಯಾದರೂ, 1,000ಕ್ಕೂ ಅಧಿಕ ಸಾವುಗಳನ್ನು ನಾವು ನೋಂದಾಯಿಸಬೇಕಾಗುತ್ತದೆ ಎಂದನಿಸುತ್ತಿದೆ’’ ಎಂದರು.

 ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ, ಚಂಡಮಾರುತದ ಪ್ರಕೋಪಕ್ಕೆ ಮೊಝಾಂಬಿಕ್, ಜಿಂಬಾಬ್ವೆ ಮತ್ತು ಮಲಾವಿ ದೇಶಗಳಲ್ಲಿ 215ಕ್ಕೂ ಮಂದಿ ಮೃತಪಟ್ಟಿದ್ದಾರೆ. ಜಿಂಬಾಬ್ವೆಯ ಪೂರ್ವದ ಚಿಮನಿಮನಿ ವಲಯದಲ್ಲಿ 80ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರೆ, ಮಲಾವಿಯಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ನೂರಾರು ಮಂದಿ ಗಾಯಗೊಂಡಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಪೂರ್ವ ಜಿಂಬಾಬ್ವೆಯ ಒಂದೇ ಕಡೆ ಸುಮಾರು 1,000 ಮನೆಗಳು ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News