ಇಂದಿರಾ ಕ್ಯಾಂಟೀನ್‌ ಆಹಾರ ವಿಷ: ಚುನಾವಣಾ ಗಿಮಿಕ್‌ಗಾಗಿ ಬಿಜೆಪಿ ಆರೋಪ- ಮೇಯರ್ ಗಂಗಾಂಬಿಕೆ

Update: 2019-03-19 17:45 GMT

ಬೆಂಗಳೂರು, ಮಾ.19: ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಇಂದಿರಾ ಕ್ಯಾಂಟೀನ್‌ನ ಆಹಾರ ವಿಷಕಾರಿಯಾಗಿದೆ ಎಂದು ಆರೋಪ ಮಾಡಿರುವುದು ಜನರಲ್ಲಿ ಭಯ ಹುಟ್ಟಿಸುವ ಹುನ್ನಾರ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅಸಮಾಧಾನ ವ್ಯಕ್ತಪಡಿ ಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ನ ಆರಂಭದ ದಿನಗಳಿಂದ ಇಲ್ಲಿಯವರೆಗೂ ಆಹಾರ ಕಳಪೆಯಾಗಿದೆ ಹಾಗೂ ವಿಷಕಾರಿಯಾಗಿದೆ ಎಂದು ಸಾರ್ವಜನಿಕವಾಗಿ ದೂರುಗಳು ಬಂದಿಲ್ಲ. ಆದರೆ, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವುದು ಬಿಜೆಪಿ ಸದಸ್ಯರ ರಾಜಕೀಯ ಹುನ್ನಾರವಾಗಿದೆ ಎಂದು ಆರೋಪಿಸಿದರು.

ರಾಜಧಾನಿಯನ್ನು ಹಸಿವು ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಇಂದಿರಾ ಕ್ಯಾಂಟೀನ್‌ನ ಆರಂಭ ಮಾಡಿದಾಗಿನಿಂದಲೂ ಬಿಜೆಪಿ ಒಂದಲ್ಲಾ ಒಂದು ಷಡ್ಯಂತ್ರ ನಡೆಸುತ್ತಲೇ ಬಂದಿದೆ. ಇಲ್ಲಿಯವರೆಗೂ ಕ್ಯಾಂಟೀನ್‌ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಗುತ್ತಿದೆ. ಆಹಾರದ ಗುಣಮಟ್ಟವು ಕಳಪೆಯೆಂದು ದೂರಿರುವುದು ರಾಜಕೀಯ ಪ್ರೇರಿತ ಆಪಾದನೆಯೇ ಹೊರತು ಯಾವುದೇ ಸತ್ಯಾಂಶವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟದಲ್ಲಿ ಯಾವುದೇ ಲೋಪದೋಷ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಇಂದಿರಾ ಕ್ಯಾಂಟೀನ್ ಆಹಾರ ತಯಾರಿಸುವ ಸಂಸ್ಥೆಯಿಂದ ಆಗಿಂದಾಗ್ಗೆ ಮಾದರಿಗಳನ್ನು ಸಂಗ್ರಹಿಸಿ ಪಾಲಿಕೆಯ ದಾಸಪ್ಪ ಆಸ್ಪತ್ರೆಯಿಂದ ಗುಣಮಟ್ಟ ಪರೀಕ್ಷಾ ವರದಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ದಿನವೂ ಒಂದು ಕ್ಯಾಂಟೀನ್‌ನಲ್ಲಿ 300 ರಿಂದ 500 ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡುತ್ತಿದ್ದು, ಪ್ರತಿದಿನ ಸರಾಸರಿ 2.10 ಲಕ್ಷ ಜನರು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ, ಮಾಜಿ ಮೇಯರ್‌ಗಳಾದ ಮಂಜುನಾಥ್ ರೆಡ್ಡಿ, ಪದ್ಮಾವತಿ ಹಾಗೂ ಪಾಲಿಕೆ ಸದಸ್ಯ ಸತ್ಯನಾರಾಯಣ ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟೀನ್ ಅಂಕಿ-ಅಂಶ

ಕ್ಯಾಂಟೀನ್- 173

ಮೊಬೈಲ್- 18

ಒಟ್ಟು ಕ್ಯಾಂಟೀನ್- 191

ಅಡುಗೆ ಕೋಣೆ- 18

ದಿನದ ಫಲಾನುಭವಿಗಳು- 2.1 ಲಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News