ನನ್ನ ಹಿಂದುತ್ವವೇ ನೈಜ: ಬಿಜೆಪಿ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಾಗ್ದಾಳಿ

Update: 2019-03-20 04:01 GMT

ಹೈದರಾಬಾದ್, ಮಾ. 20: ಬಿಜೆಪಿ ಇತರ ಧರ್ಮಗಳ ಬಗ್ಗೆ ದ್ವೇಷ ಹರಡುವ ಮೂಲಕ ಮತಗಳಿಕೆಯ ಪ್ರಯತ್ನ ಮಾಡುತ್ತಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಗಂಭೀರ ಆರೋಪ ಮಾಡಿದ್ದಾರೆ.

"ಬಿಜೆಪಿ ರಾಜಕೀಯ ಪಕ್ಷವೇ ಅಥವಾ ಧಾರ್ಮಿಕ ಸಂಘಟನೆಯೇ ? ರಾಮ, ಕೃಷ್ಣ ಅಥವಾ ಕಂಸ, ಶೂರ್ಪನಖಿ ಅಥವಾ ಸತ್ಯಭಾಮೆಯ ಜನ್ಮಸ್ಥಳವನ್ನು ನಿರ್ಧರಿಸಲು ಯಾಕೆ ಮುಂದಾಗಬೇಕು ? ಎಂದು ಪುತ್ರಿ ಕವಿತಾ ಪ್ರತಿನಿಧಿಸುವ ನಿಝಾಮಾಬಾದ್ ಕ್ಷೇತ್ರದಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.

ಬಿಜೆಪಿ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ ಮತ್ತು ಅನಭಿವೃದ್ಧಿಯನ್ನು ಮರೆಮಾಚುವ ಸಲುವಾಗಿ ರಾಮ ಜನ್ಮಭೂಮಿಯಂಥ ವಿವಾದವನ್ನು ಕೆದಕಿ ಜನರ ಗಮನ ಸೆಳೆಯುವ ಹುನ್ನಾರ ನಡೆಸಿದೆ ಎಂದು ಆಪಾದಿಸಿದರು.

"ಅಯೋಧ್ಯೆಯಲ್ಲಿ ವಿವಾದ ಇದ್ದರೆ ನ್ಯಾಯಾಂಗ ಬಗೆಹರಿಸಲಿ. ಧಾರ್ಮಿಕ ವಿಚಾರಗಳಲ್ಲಿ ರಾಜಕೀಯ ಪಕ್ಷಗಳು ಏಕೆ ಹಸ್ತಕ್ಷೇಪ ಮಾಡಬೇಕು? ಚುನಾವಣೆ ಸಂದರ್ಭದಲ್ಲಿ ಆ ಬಗ್ಗೆ ಏಕೆ ಮಾತನಾಡಬೇಕು ? ಅದು ಪೀಠಾಧಿಪತಿಗಳು ಮತ್ತು ನ್ಯಾಯಾಲಯ ನಿರ್ಧರಿಸಬೇಕಾದ ವಿಚಾರ; ರಾಜಕೀಯ ಪಕ್ಷಗಳು ನಿರ್ಧರಿಸುವ ವಿಚಾರವಲ್ಲ" ಎಂದು ಹೇಳಿದರು.

ಹಿಂದುತ್ವದ ಹಕ್ಕಿನ ಬಗ್ಗೆ ಬಿಜೆಪಿ ಹಾಗೂ ವಿಎಚ್‌ಪಿ ಪೇಟೆಂಟ್ ಪಡೆದಿವೆಯೇ ? ನಾವು ಹಿಂದೂಗಳಲ್ಲವೇ ? ನಾವೂ ಪೂಜೆ ಮತ್ತಿತರ ಹಿಂದೂ ಸಂಪ್ರದಾಯ ಅನುಸರಿಸುವುದಿಲ್ಲವೇ ? ಧಾರ್ಮಿಕ ಶ್ರದ್ಧೆಯಿಂದ ನಾವು ಹಿಂದೂ ಹಬ್ಬಗಳನ್ನು ಆಚರಿಸುವುದಿಲ್ಲವೇ ? ಪ್ರತಿ ಕುಟುಂಬಗಳು ಕೂಡಾ ಒಂದು ಅಥವಾ ಹೆಚ್ಚು ದೇವರ ಫೋಟೊಗಳನ್ನು ತಮ್ಮ ಮನೆಗಳಲ್ಲಿ ಹೊಂದಿದೆ. ಅವರು ಹಿಂದೂಗಳಲ್ಲವೇ ? ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ವಿರುದ್ಧ ದ್ವೇಷ ಹರಡುವಂಥದ್ದು. ಅವರ ಹಿಂದುತ್ವ ಬೋಗಸ್. ನಾವು ಪ್ರತಿದಿನ ಅನುಸರಿಸುವುದು ಹಿಂದುತ್ವ. ನಾವು ಪ್ರತಿ ಧಾರ್ಮಿಕ ಕಾರ್ಯಕ್ರಮದ ಕೊನೆಯಲ್ಲೂ ಯಜ್ಞ ಮಾಡುತ್ತೇವೆ; ಮಂತ್ರ ಉಚ್ಚರಿಸುತ್ತೇವೆ; ವಿಶ್ವಬ್ರಾತೃತ್ವ ಮತ್ತು ವಿಶ್ವಶಾಂತಿ ಬೋಧಿಸುತ್ತೇವೆ ಎಂದು ಹೇಳಿದ ಅವರು, "ಸ್ವಸ್ತಿ ಪ್ರಜಾಭ್ಯಾಂ ಪರಿಪಾಲಯಂತಾಂ.. ಲೋಕಾ, ಸಮಸ್ತಾ ಸುಖಿನೋ ಭವಂತು" (ಎಲ್ಲ ಜನರನ್ನೂ ಪೋಷಿಸು; ಲೋಕದ ಎಲ್ಲರೂ ಸುಖವಾಗಿರುವಂತೆ ಕರುಣಿಸು) ಎಂಬ ಮಂತ್ರ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News