ದೇಶದಲ್ಲೇ ಮೊದಲ ಬಾರಿ ಏರ್‌ಟ್ಯಾಕ್ಸಿ ಸೇವೆ ಆರಂಭಿಸಲಿದೆ ಈ ನಗರ

Update: 2019-03-21 03:39 GMT

ಬೆಂಗಳೂರು, ಮಾ.21: ರಾಜ್ಯ ಸರ್ಕಾರದ ಯೋಜನೆ ಕೈಗೂಡಿದಲ್ಲಿ ಬೆಂಗಳೂರು, ಏರ್‌ಟ್ಯಾಕ್ಸಿ ಸೇವೆ ಹೊಂದಿದ ದೇಶದ ಮೊಟ್ಟಮೊದಲ ನಗರ ಎಂಬ ಹೆಗ್ಗಳಿಕೆಗೆ ಶೀಘ್ರವೇ ಪಾತ್ರವಾಗಲಿದೆ.

ನಗರದಲ್ಲಿ ಎಲೆಕ್ಟ್ರಿಕ್ ಏರ್-ಟ್ಯಾಕ್ಸಿ ಸೇವೆಯನ್ನು ಒದಗಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಈಗಾಗಲೇ ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ಹೇಳಿವೆ. ಈ ಅಧ್ಯಯನ ನಡೆಸಲು ಸಂಚಾರ ಸೇವಾ ಕಂಪೆನಿಗಳಾದ ಮೆಕ್‌ಫ್ಲೈ.ಏರೊ ಹಾಗೂ ಹೆಲಿಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ.

ಲಂಡನ್ ಮೂಲದ ಮೆಕ್‌ಫ್ಲೈ.ಏರೊ ಈಗಾಗಲೇ ಮಾಸ್ಕೊ, ತರೂಸಾ ಮತ್ತು ದುಬೈನಲ್ಲಿ ಈ ಸೇವೆ ಒದಗಿಸುತ್ತಿದ್ದು, ಸಿಂಗಾಪುರ ಹಾಗೂ ಲಂಡನ್‌ನಲ್ಲೂ ಈ ಸೇವೆ ಆರಂಭಿಸಲು ಉದ್ದೇಶಿಸಿದೆ. ಇದೀಗ ಬೆಂಗಳೂರಿನಲ್ಲಿ ಕೂಡಾ ನಗರಾಭಿವೃದ್ಧಿ ಇಲಾಖೆಯ ಜತೆಗೆ 200 ಲ್ಯಾಂಡಿಂಗ್ ಪ್ಯಾಡ್‌ಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಎತ್ತರದ ಕಟ್ಟಡಗಳು ಹಾಗೂ ಇತರ ಪ್ರದೇಶಗಳನ್ನು ಇದಕ್ಕಾಗಿ ಪರಿಶೀಲಿಸಲಾಗುತ್ತಿದೆ. ಆದರೆ ಇದುವರೆಗೆ ಕೇವಲ ನಾಲ್ಕು ಇಂಥ ಪ್ಯಾಡ್‌ಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಮಾಣಪತ್ರ ನೀಡಿದೆ. ಆದರೆ ಉಳಿದ ಕಟ್ಟಡಗಳನ್ನು ಇದಕ್ಕೆ ಬಳಸಿಕೊಳ್ಳಲು ಅವಕಾಶವಿದೆ ಎಂದು ಮೂಲಗಳು ವಿವರಿಸಿವೆ.

ವಿಶ್ವಾದ್ಯಂತ 150ಕ್ಕೂ ಹೆಚ್ಚು ಸಂಸ್ಥೆಗಳು ಈ ಸೇವೆ ಒದಗಿಸುತ್ತಿವೆ. ನಾಲ್ಕು ಮಂದಿಗೆ ಆಸನ ವ್ಯವಸ್ಥೆ ಹೊಂದಿರುವ ಏರ್‌ಟ್ಯಾಕ್ಸಿಗಳು 400 ಕೆ.ಜಿ. ಸಾಮರ್ಥ್ಯ ಹೊಂದಿವೆ. 1,000 ಮೀಟರ್ ಎತ್ತರದವರೆಗೂ ತಲುಪಿ ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.

ಈ ಏರ್‌ಟ್ಯಾಕ್ಸಿಗೆ ಇ-ವಿಟಿಓಎಲ್ (ಎಲೆಕ್ಟ್ರಿಕ್ ವರ್ಟಿಕಲ್ ಟೇಕಾಫ್ ಲ್ಯಾಂಡಿಂಗ್) ವಿಮಾನಗಳನ್ನು ಬಳಸಲು ಮೆಕ್‌ಫ್ಲೈ ಉದ್ದೇಶಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುವ ಈ ವೈಮಾನಿಕ ವಾಹನಗಳು ನಗರದ ಒಳಗೆ ಕೂಡಾ ಇಳಿಯುವ ಮತ್ತು ಮೇಲಕ್ಕೇರಬಹುದಾಗಿದೆ. ಲ್ಯಾಂಡಿಂಗ್ ಪ್ಯಾಡ್‌ಗಳ ನಡುವೆ ವಾಯು ಕಾರಿಡಾರ್‌ಗಳನ್ನು ಗುರುತಿಸಲಾಗುತ್ತದೆ. ಜತೆಗೆ ಭೌಗೋಳಿಕ ಗಡಿಯ ವಲಯಗಳನ್ನು ಮತ್ತು ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಪ್ರತಿ ಲ್ಯಾಂಡಿಂಗ್ ಪ್ಯಾಡ್‌ನಲ್ಲೂ ಆರಂಭಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News