ಜಗತ್ತಿನ 'ಸಂತುಷ್ಟ ದೇಶಗಳ ಪಟ್ಟಿ'ಯಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿತ

Update: 2019-03-21 11:12 GMT

ವಿಶ್ವಸಂಸ್ಥೆ, ಮಾ.21: ಭಾರತೀಯರು 2018ರಲ್ಲಿ ಇದ್ದಷ್ಟೂ ಈಗ ಸಂತಸದಿಂದಿಲ್ಲ. ವಿಶ್ವಸಂಸ್ಥೆಯ ವಿಶ್ವ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಳೆದ ವರ್ಷಕ್ಕಿಂತ ಏಳು ಸ್ಥಾನ ಕುಸಿತ ಕಂಡು, 140ನೇ ಸ್ಥಾನದಲ್ಲಿದೆ. ಬುಧವಾರ ಬಿಡುಗಡೆಯಾದ ವರದಿಯ ಪ್ರಕಾರ ಸತತ ಎರಡನೇ ವರ್ಷ ಕೂಡಾ ಫಿನ್ಲೆಂಡ್ ಅಗ್ರಸ್ಥಾನಿಯಾಗಿದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲ ಮಾರ್ಚ್ 20ರಂದು ಈ ವರದಿ ಬಿಡುಗಡೆ ಮಾಡಿದೆ. ಈ ದಿನವನ್ನು 2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ವಿಶ್ವ ಸಂತೋಷ ದಿನ ಎಂದು ಘೋಷಿಸಿತ್ತು.

ಜನಕಲ್ಯಾಣಕ್ಕೆ ನೆರವಾಗುವ ಆರು ಮಾನದಂಡಗಳಾದ ಆದಾಯ, ಸ್ವಾತಂತ್ರ್ಯ, ವಿಶ್ವಾಸ, ಆರೋಗ್ಯಕರ ಜೀವನದ ನಿರೀಕ್ಷಿತ ಅವಧಿ, ಸಾಮಾಜಿಕ ಬೆಂಬಲ ಮತ್ತು ಉದಾರತೆಯ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗುತ್ತದೆ.

ವರದಿಯ ಪ್ರಕಾರ ಕಳೆದ ಕೆಲ ವರ್ಷಗಳಲ್ಲಿ ಒಟ್ಟಾರೆ ಸುಖ ವಿಶ್ವಾದ್ಯಂತ ಕಡಿಮೆಯಾಗಿದೆ. ಕಳೆದ ವರ್ಷ ಭಾರತ 133ನೇ ಸ್ಥಾನದಲ್ಲಿದ್ದು, ಈ ಬಾರಿ 140ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 156 ದೇಶಗಳನ್ನು ಈ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಋಣಾತ್ಮಕ ಭಾವನೆಗಳು ಹೆಚ್ಚಿರುವುದು, ಆತಂಕ, ಸಿಟ್ಟು ಮತ್ತು ಹತಾಶೆ ಈ ಕುಸಿತಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.

ಡೆನ್ಮಾರ್ಕ್, ನಾರ್ವೆ, ಐಸ್ಲೆಂಡ್ ಮತ್ತು ನೆದರ್ ಲ್ಯಾಂಡ್ಸ್ ಪಟ್ಟಿಯಲ್ಲಿ ಫಿನ್ಲೆಂಡ್ ನಂತರದ ಸ್ಥಾನದಲ್ಲಿವೆ. ಯುದ್ಧಪೀಡಿತ ದಕ್ಷಿಣ ಸೂಡಾನ್ ಅತ್ಯಂತ ಅಸಂತೋಷದ ದೇಶ ಎನಿಸಿಕೊಂಡಿದೆ. ಆಫ್ರಿಕನ್ ರಿಪಬ್ಲಿಕ್, ಅಫ್ಘಾನಿಸ್ತಾನ, ತಾಂಜಾನಿಯಾ ಮತ್ತು ರುವಾಂಡಾ ಪಟ್ಟಿಯ ಕೊನೆಯಲ್ಲಿರುವ ದೇಶಗಳು.

ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ (67), ಬಾಂಗ್ಲಾದೇಶ (125) ಮತ್ತು ಚೀನಾ (93) ಭಾರತಕ್ಕಿಂತ ಮೇಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News