ಮೈತ್ರಿ ಸರಕಾರದಲ್ಲಿ ಮೂರು ಗುಂಪುಗಳಾಗಿವೆ: ಬಿಜೆಪಿ ವಕ್ತಾರ ಗೋ.ಮಧುಸೂದನ್

Update: 2019-03-21 13:23 GMT

ಬೆಂಗಳೂರು, ಮಾ. 21: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಒಂದು ರೀತಿಯಲ್ಲಿ ವಿ-3 ಆಗುತ್ತಿದ್ದು, ಮೈತ್ರಿ ಸರಕಾರದಲ್ಲಿ ಮೂರು ಗುಂಪುಗಳಾಗಿವೆ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಗುರುವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಲು ಆಗಲಿಲ್ಲ ಎನ್ನುವ ನೋವು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ತೀವ್ರವಾಗಿ ಕಾಡುತ್ತಿದೆ ಎಂದರು.

ಗೆಲುವು ನಮ್ಮದೆ: ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆಂದು ಈಗಲೇ ಹೇಳುವುದು ಬೇಡ. ಆದರೆ, ಈ ಚುನಾವಣೆಯಲ್ಲಿಯೂ ಕಪ್ ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈಗ ಮೊದಲನೇ ಸ್ಥಾನದಲ್ಲಿದೆ. ಆದರೆ, ಮೊದಲ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೆ ಸ್ಥಾನಕ್ಕೆ ಕುಸಿದಿದೆ. ಏನೇ ಆದರೂ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಮೈತ್ರಿ ಪಕ್ಷಗಳಿಗೆ ಇನ್ನೂ ಅಭ್ಯರ್ಥಿಗಳನ್ನೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ಮಧುಸೂದನ್ ವ್ಯಂಗ್ಯವಾಡಿದರು.

ಕುಲಕರ್ಣಿ ಹೆಸರು ಸೇರಿಸಿ: ನಿರ್ಮಾಣ ಹಂತದ ಕಟ್ಟಡ ಕುಸಿತದ ದುರಂತ ಘಟನೆಯಲ್ಲಿ ರಾಜ್ಯ ಸರಕಾರದ ತಪ್ಪಿದೆ. ಕಟ್ಟಡ ಕುಸಿದು, ಅನಾಹುತ ಸಂಭವಿಸಿದ್ದರೂ ಕಟ್ಟಡದ ಮಾಲಕರನ್ನು ವಶಕ್ಕೆ ಪಡೆದಿರಲಿಲ್ಲ. ಈಗ ಗಂಗಪ್ಪಕಂತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಟ್ಟಡದ ಜಾಗ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವನ ಹೆಸರಲ್ಲಿದೆ. ಆದರೆ ಜಾಗದ ನಿಜವಾದ ಮಾಲಕ ವಿನಯ್ ಕುಲಕರ್ಣಿ. ಅದು ಬೇನಾಮಿ ಆಸ್ತಿಯಾಗಿದೆ. ಹೀಗಾಗಿ ಎಫ್‌ಐಆರ್‌ನಲ್ಲಿ ಕುಲಕರ್ಣಿಯವರ ಹೆಸರು ಸೇರಿಸಬೇಕು ಎಂದು ಒತ್ತಾಯಿಸಿದರು.

ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನರನ್ನು ಕಂಡು ಮೈತ್ರಿ ಸರಕಾರದ ಮುಖಂಡರ ಜಂಘಾಬಲವೆ ಉಡುಗಿ ಹೋಗಿದೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನೆಗೆ ಬಂದಿದ್ದ ಮಂಡ್ಯ ಮತ್ತು ಹಾಸನದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೂಗಾಡಿದ್ದಾರೆ ಎಂದು ಟೀಕಿಸಿದರು.

‘ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಸ್ಥಳಕ್ಕೆ ಇದುವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿಲ್ಲ. ಅವರಿಗೆ ತಮ್ಮ ಮಗ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದೇ ಮುಖ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಧಾರವಾಡಕ್ಕೆ ಹೋಗದೆ ಮಂಡ್ಯದಲ್ಲೇ ಕೂತಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ನಂಬರ್ ಝೀರೋ ಆದರೂ ಅಚ್ಚರಿ ಇಲ್ಲ’

-ತೇಜಸ್ವಿನಿ ಗೌಡ , ವಿಧಾನ ಪರಿಷತ್ ಸದಸ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News