ಎಐಸಿಸಿ ಸ್ಕ್ರೀನಿಂಗ್ ಹಾಗೂ ಚುನಾವಣಾ ಸಮಿತಿ ಸಭೆ: ದಿಲ್ಲಿಗೆ ತೆರಳಿದ ಕಾಂಗ್ರೆಸ್ ನಾಯಕರು

Update: 2019-03-21 14:45 GMT

ಬೆಂಗಳೂರು, ಮಾ.21: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಎಐಸಿಸಿ ಸ್ಕ್ರೀನಿಂಗ್ ಸಮಿತಿ ಹಾಗೂ ಚುನಾವಣಾ ಸಮಿತಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಹೊಸದಿಲ್ಲಿಗೆ ತೆರಳಿದ್ದಾರೆ.

ಕಾಂಗ್ರೆಸ್ ಪಾಲಿಗೆ ಲಭ್ಯವಾಗಿರುವ 20 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಚುನಾವಣಾ ಕಾರ್ಯತಂತ್ರ ಹೇಗಿರಬೇಕು ಎಂಬುದರ ಕುರಿತು ನಾಳೆ ನಡೆಯಲಿರುವ ಸಭೆಗಳಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ.

ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಉತ್ತರಪ್ರದೇಶದ ಅಮೇಥಿ ಜೊತೆಗೆ ನಮ್ಮ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಇದೇ ವೇಳೆ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಮುಖಂಡರು ಒತ್ತಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಮೈಸೂರು-ಕೊಡಗು ಅಥವಾ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಆಹ್ವಾನ ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯೂ ನಮ್ಮ ರಾಜ್ಯದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ರಾಹುಲ್ ಗಾಂಧಿ ಕರ್ನಾಟಕದಿಂದ ಕಣಕ್ಕಿಳಿದರೆ, ದಕ್ಷಿಣ ಭಾರತದ ಇತರ ರಾಜ್ಯಗಳ ಮೇಲೂ ಪ್ರಭಾವ ಬೀರುತ್ತದೆ ಎಂಬುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News