ಬಿಜೆಪಿ ಸೇರಿದ ಗಂಭೀರ್: ಚುನಾವಣೆಯಲ್ಲಿ ಸ್ಪರ್ಧೆ ಬಹುತೇಕ ಖಚಿತ

Update: 2019-03-22 15:41 GMT

ಹೊಸದಿಲ್ಲಿ, ಮಾ. 22: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಶುಕ್ರವಾರ ಬಿಜೆಪಿಗೆ ಸೇರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರನ್ನು ದಿಲ್ಲಿಯ 7 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ.

 ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ರವಿಶಂಕರ್ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಗೌತಮ್ ಗಂಭೀರ್ ದಿಲ್ಲಿಯಲ್ಲಿ ಬಿಜೆಪಿ ಸೇರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯಿಂದ ಪ್ರಭಾವಿತನಾಗಿ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ನನಗೆ ಬಿಜೆಪಿ ಸೇರುವ ಗೌರವ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದು ಗಂಭೀರ್ ಹೇಳಿದ್ದಾರೆ.

  ಗಂಭೀರ್ ಅವರು 2011ರ ವಿಶ್ವಕಪ್ ಹಾಗೂ 2007 ಟಿ20 ವಿಶ್ವಕಪ್‌ನಲ್ಲಿ ಭಾರತ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಪ್ರಸ್ತುತ ಮೀನಾಕ್ಷಿ ಲೇಖಿ ಪ್ರತಿನಿಧಿಸುತ್ತಿರುವ ಪಕ್ಷದ ಹೊಸದಿಲ್ಲಿ ಕ್ಷೇತ್ರದಲ್ಲಿ ಗಂಭೀರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

 ಗಂಭೀರ್ ಅವರು ಪಕ್ಷ ಸೇರಿರುವುದು ಬಿಜೆಪಿಗೆ ಪ್ರಮುಖ ನಿಯೋಜನೆ ಎಂದು ವಿವರಿಸಿರುವ ಜೇಟ್ಲಿ, ಲೋಕಸಭಾ ಚುನಾವಣೆಯಲ್ಲಿ ಗಂಭೀರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಗಂಭೀರ್ ಅವರು ಬೆಳೆದಿರುವುದು ಹಾಗೂ ವಿದ್ಯಾಭ್ಯಾಸ ಪಡೆದಿರುವುದು ದಿಲ್ಲಿಯಲ್ಲಿ. ಅವರಿಗೆ ದಿಲ್ಲಿಯಲ್ಲಿ ಉತ್ತಮ ಸಂಪರ್ಕ ಇದೆ ಎಂದು ಹೇಳಿರುವ ಜೇಟ್ಲಿ, ಪಕ್ಷ ಗಂಭೀರ್ ಅವರ ಪ್ರತಿಭೆಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಿದೆ ಎಂದರು.

ಗಂಭೀರ್ ಅವರು ಇಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಕೂಡ ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News